ತಿರುಪತಿ ತಿರುಮಲ ಶ್ರೀವಾರಿ ದೇವಾಸ್ಥಾನದ 2023-24ರ ಆಸ್ತಿ ವಿವರವನ್ನು ಟಿಟಿಡಿ ಹಂಚಿಕೊಂಡಿದೆ. ಈ ವರ್ಷ ತಿಮ್ಮಪ್ಪನ ಆದಾಯ ದುಪ್ಪಟ್ಟಾಗಿದೆ. ಕಳೆದ ವರ್ಷ ಅಂದರೆ ಕೊರೊನಾ ಬಳಿಕ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದ್ದು, ಈ ವರ್ಷವೂ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಈ ಬಾರಿ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ತಿರುಪತಿಗೆ ಭೇಟಿ ನೀಡುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ. ಕೊರೊನಾ ನಂತರ ಪ್ರತಿ ತಿಂಗಳು 100 ಕೋಟಿಗೂ ಹೆಚ್ಚು ಹುಂಡಿ ಕಾಣಿಕೆ ಬರುತ್ತಿದೆ.
ತಿರುಮಲ ದೇವರ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇಶ ವಿದೇಶಗಳಿಂದ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ನಿತ್ಯವೂ ಸ್ವಾಮಿಗೆ ಸಾಕಷ್ಟು ಕಾಣಿಕೆಗಳನ್ನು ಅರ್ಪಿಸುತ್ತಾರೆ. ಲೆಕ್ಕವಿಲ್ಲದಷ್ಟು ಚಿನ್ನ ನಿತ್ಯ ಕಾಣಿಕೆ ರೂಪದಲ್ಲಿ ತಿಮ್ಮಪ್ಪನ ಖಜಾನೆಯನ್ನು ತಲುಪುತ್ತದೆ. ಅಲ್ಲದೆ ಸಾವಿರಾರು ಕೆಜಿ ಚಿನ್ನ, ಸಾವಿರಾರು ಕೋಟಿ ಠೇವಣಿ ಇಡಲಾಗಿದೆ. ಹೀಗಾಗಿ ತಿರುಪತಿ ತಿಮ್ಮಪ್ಪನನ್ನು ಶ್ರೀಮಂತ ದೇವರು ಎಂದು ಕರೆಯಲಾಗುತ್ತದೆ. ಹಾಗಾದರೆ ತಿರುಮಲ ಶ್ರೀವಾರಿ ಆಸ್ತಿ ಎಷ್ಟಿದೆ ಅನ್ನೋದನ್ನು ನೋಡೋಣ.
ಕಲಿಯುಗ ತಿರುಮಲದ ವೆಂಕಟೇಶ್ವರ ಸ್ವಾಮಿಯ ಆದಾಯ ಪ್ರತಿ ವರ್ಷ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. 2023-24ರಲ್ಲಿ ಟಿಟಿಡಿ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 1,161 ಕೋಟಿಗಳ ಸ್ಥಿರ ಠೇವಣಿಗಳನ್ನು ಮಾಡಿದೆ. ಇದು ಟಿಟಿಡಿಯಿಂದ ಈವರೆಗೆ ಮಾಡಿದ ಅತಿ ಹೆಚ್ಚು ನಗದು ಠೇವಣಿ ಮೊತ್ತವಾಗಿದೆ.
ಅಲ್ಲದೆ 2023-24ರಲ್ಲಿ 1,031 ಕೆಜಿ ಚಿನ್ನದ ಠೇವಣಿ ಮತ್ತು ಒಟ್ಟು ಚಿನ್ನದ ನಿಕ್ಷೇಪಗಳು 11,329 ಕೆಜಿಯಷ್ಟು ಕಾಣಿಕೆಯಾಗಿ ಬಂದಿವೆ. ಅಲ್ಲದೆ ಇವುಗಳ ಮೇಲೆ ವಾರ್ಷಿಕವಾಗಿ 1,200 ಕೋಟಿ ರೂ.ಗಳ ಬಡ್ಡಿ ಆದಾಯವನ್ನು ಟಿಟಿಡಿ ಪಡೆಯುತ್ತಿದೆಯಂತೆ.