ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮೋದಿಜೀ ಕಾರಣಕರ್ತರು: ಗೋವಿಂದ ಕಾರಜೋಳ

VK NEWS
By -
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಜೀ ಅವರ ಅಭಿವೃದ್ಧಿ ಎಂಬುದು ಕೇವಲ ಭಾಷಣಕ್ಕೆ ಸೀಮಿತ ಆಗಲಿಲ್ಲ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅವರು ಕಾರಣಕರ್ತರಾಗಿದ್ದಾರೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮೆಚ್ಚುಗೆ ಸೂಚಿಸಿದರು.

ಹೋಟೆಲ್ “ಜಿ.ಎಂ. ರಿಜಾಯ್ಸ್” ನ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದಲ್ಲಿ ಇಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವೈದ್ಯಕೀಯ ಶಿಕ್ಷಣ ಬಡವರಿಗೆ ಸಿಗಲಾರದ ಸ್ಥಿತಿ ಇತ್ತು. ಇವತ್ತು ದೇಶದ ಉದ್ದಗಲಕ್ಕೆ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವ ಮೂಲಕ ಈ ಸಮಸ್ಯೆ ಪರಿಹರಿಸಲಾಗಿದೆ. ಹಿಂದೆ ವರ್ಷಕ್ಕೆ 50 ಸಾವಿರ ವೈದ್ಯರು ದೇಶದಲ್ಲಿ ಹೊರಕ್ಕೆ ಬರುತ್ತಿದ್ದರು. ಈಗ ಮೋದಿಜೀ ಅವರ ಕಾಲದಲ್ಲಿ 1.50 ಲಕ್ಷ ವೈದ್ಯರು ಪ್ರತಿವರ್ಷ ಹೊರಬರುತ್ತಿದ್ದಾರೆ. ಇದು ಸಾಮಾಜಿಕ ಕಳಕಳಿಯ ನಿದರ್ಶನ ಎಂದು ವಿವರಿಸಿದರು.

ಬಡವರಿಗೆ ಬ್ಯಾಂಕ್ ಎಂದರೆ ಗೊತ್ತಿರಲಿಲ್ಲ. ಬ್ಯಾಂಕ್ ಒಳಗೆ ಹೆಜ್ಜೆ ಇಡಲು ಆಗುತ್ತಿರಲಿಲ್ಲ. ಅವರೆಲ್ಲರಿಗೆ ಮುದ್ರಾ ಯೋಜನೆ ಸೇರಿ ವಿವಿಧ ಯೋಜನೆಗಳಲ್ಲಿ ಬಡವರನ್ನೂ ಕೂಡ ಬ್ಯಾಂಕಿಗೆ ಕರೆತರುವ ಮೂಲಕ ಸಹಾಯ-ಸಹಕಾರ ನೀಡಿದ್ದಾರೆ. ಮೋದಿಜೀ ಅವರು ವಿಕಸಿತ ಭಾರತ ಮತ್ತು ಅವರ 10 ವರ್ಷಗಳ ಆಡಳಿತವನ್ನು ಗಮನಿಸಿದರೆ ಸರ್ವೋದಯದ ಸಿದ್ಧಾಂತ, ಅಂತ್ಯೋದಯದ ಕಾರ್ಯಕ್ರಮ, ಭ್ರಷ್ಟಾಚಾರ ಮುಕ್ತ ಭಾರತದ ಗುರಿಯೊಂದಿಗೆ ಆಡಳಿತ ಮಾಡಿದ್ದಾರೆ ಎಂದು ಸ್ಪಷ್ಟವಾಗುತ್ತದೆಯೆಂದು ನುಡಿದರು.

ಜಾತಿಯ ಹೆಸರಿನಲ್ಲಿ ಯಾವತ್ತೂ ಕೂಡ ರಾಜಕಾರಣ ಮಾಡಲಿಲ್ಲ. ಮೋದಿಜೀ ಅವರು ಈ ದೇಶದ ಶ್ರೇಷ್ಠ ಹಿಂದುಳಿದ ವರ್ಗಗಳ ನಾಯಕ. ಅವರು ಯಾವತ್ತೂ ಕೂಡ ಜಾತಿಯನ್ನು ಕೇಳಿಕೊಂಡು ರಾಜಕಾರಣ ಮಾಡಿಲ್ಲ ಎಂದು ಹೇಳಿದರು.

ಸರ್ವರ ಕಲ್ಯಾಣ ಬಯಸಿದವರು. ಅವರ 10 ವರ್ಷಗಳ ಆಡಳಿತದಲ್ಲಿ ಅಸಾಧಾರಣ ಅಭಿವೃದ್ಧಿ ಆಗಿದೆ. ಪ್ರಪಂಚದ ಎಲ್ಲ ದೇಶಗಳ ಪ್ರೀತಿ, ವಿಶ್ವಾಸ, ಗೌರವವನ್ನು ಭಾರತ ಪಡೆಯುವಂತಾಗಿದೆ. ಭಾರತದ ಜೊತೆ ವ್ಯಾಪಾರ, ವಹಿವಾಟು, ಸ್ನೇಹಕ್ಕಾಗಿ ಪ್ರಪಂಚದ ಅನೇಕ ದೇಶಗಳು ಹಾತೊರೆಯುತ್ತಿವೆ. ಇದೆಲ್ಲಕ್ಕೂ ಮೋದಿಜೀ ಅವರ ಆಡಳಿತವೇ ಕಾರಣ ಎಂದು ತಿಳಿಸಿದರು.

ಮೋದಿಜೀ ಅವರ ಜೊತೆ ಕೆಲಸ ಮಾಡುವ ಸುವರ್ಣಾವಕಾಶ..

ನನ್ನ ಜೀವನದಲ್ಲಿ ಇದೊಂದು ಸುವರ್ಣಾವಕಾಶ ಎಂದು ಭಾವಿಸುವೆ. ನರೇಂದ್ರ ಮೋದಿ ಜೀಯವರು ಕಳೆದ 23 ವರ್ಷಗಳಿಂದ ಸಾಂವಿಧಾನಿಕ ಹುದ್ದೆಯಲ್ಲಿದ್ದು, ಗುಜರಾತ್ ಮುಖ್ಯಮಂತ್ರಿಗಳಾಗಿ, ದೇಶದ ಪ್ರಧಾನಮಂತ್ರಿಗಳಾಗಿ ದೇಶದ ಅಭಿವೃದ್ಧಿ ಮಾಡಿದ್ದಾರೆ. ಅಲ್ಲದೆ ಕಳಂಕರಹಿತ ರಾಜಕಾರಣ ಮಾಡಿದ ಏಕೈಕ ಶ್ರೇಷ್ಠ ವ್ಯಕ್ತಿ ಎಂದು ಗೋವಿಂದ ಕಾರಜೋಳ ಅವರು ನುಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಒಂದೇ ಪಕ್ಷದವರು 60 ವರ್ಷಗಳ ಕಾಲ ಆಡಳಿತ ಮಾಡಿದ್ದಾರೆ. ಅವರು ಕಳಂಕ ಹೊತ್ತುಕೊಂಡರು. ಆದರೆ, ಮೋದಿಜೀ ಅವರು ದೇಶದ ಅಭಿವೃದ್ಧಿ ಮಾಡಿ ಪ್ರಪಂಚದ ಅನೇಕ ದೇಶಗಳ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ ಎಂದು ವಿಶ್ಲೇಷಿಸಿದರು. ಅವರ ಜೊತೆ ಲೋಕಸಭಾ ಸದಸ್ಯನಾಗಿ ಕೆಲಸ ಮಾಡುವ ಅವಕಾಶ ನನಗೆ ಲಭಿಸುತ್ತಿರುವುದು ಜೀವನದ ಸುವರ್ಣಾವಕಾಶ ಎನ್ನಲು ಕಾರಣ ಎಂದು ವಿವರಿಸಿದರು.

ಮೋದಿಜೀ ಅವರ ನೇತೃತ್ವದ ಕಾರ್ಯಕ್ರಮಗಳು, ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಕಾಲದ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುವ ಮೂಲಕ ಮತ ಯಾಚನೆ ಮಾಡಲಿದ್ದೇವೆ. ಜೆಡಿಎಸ್ ಪಕ್ಷವು ಎನ್‍ಡಿಎ ತೆಕ್ಕೆಗೆ ಬಂದಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ರುದ್ರಯ್ಯ, ಲಕ್ಷ್ಮೀನಾರಾಯಣ್, ರಾಜ್ಯ ವಕ್ತಾರರಾದ ಮೋಹನ್ ವಿಶ್ವ, ಸುರಭಿ ಹೋದಿಗೆರೆ, ವೆಂಕಟೇಶ್ ದೊಡ್ಡೇರಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.


Post a Comment

0Comments

Post a Comment (0)