ಬೆಂಗಳೂರು : ನಾಟ್ಯೇಶ್ವರ ನೃತ್ಯ ಶಾಲೆಯ ವತಿಯಿಂದ ಮಾರ್ಚ್ 17, ಭಾನುವಾರ ಸಂಜೆ ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿರುವ ಶುಕ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾಟ್ಯೇಶ್ವರ ನೃತ್ಯ ಉತ್ಸವ - 2024ರ ಸಂಭ್ರಮದಲ್ಲಿ ಗುರು ಕಲಾಯೋಗಿ ಶ್ರೀ ಕೆ.ಪಿ. ಸತೀಶ್ ಬಾಬು ಅವರ ಶಿಷ್ಯೆ ಕು|| ಭಾವನಾ ಭಾಗವತ್ "ಏಕವ್ಯಕ್ತಿ ನೃತ್ಯ ಪ್ರದರ್ಶನ" ನಡೆಸಿಕೊಟ್ಟರು.ಕು|| ಭಾವನಾ ಭಾಗವತ್ ಅವರು ತಿರುಮಲೆ ಶ್ರೀನಿವಾಸ್ (ಚಾಮಿ)ರವರು ರಚಿಸಿದ "ಪುಷ್ಪಾಂಜಲಿ-ಗಣಪತಿ ಶ್ಲೋಕ-ಗುರುವಂದನೆ" ಕಾರ್ಯಕ್ರಮ ಆರಂಭಿಸಿ, ಅನ್ನಮಾಚಾರ್ಯರ "ಅದಿವೋ ಅಲ್ಲದಿವೋ", ಪುರಂದರದಾಸರ "ಚಂದ್ರಚೂಡ ಶಿವಶಂಕರ", ಡಿ.ವಿ. ಗುಂಡಪ್ಪರ "ಏನೀ ಮಹಾನಂದವೇ", ಸಂತ ನಾಮದೇವರ "ಅಭಂಗ್-ಏ-ಹೋ ವಿಠಲೇ" ಮತ್ತು "ದೀಪಾಂಜಲಿ"ಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇವರು ಅಭಿನಯಿಸಿದ ಒಂದೊಂದು ನೃತ್ಯವೂ ನೆರೆದಿದ್ದ ಕಲಾಭಿಮಾನಿಗಳ ಕಣ್ಮನ ತಣಿಸಿತು.
ಇವರ ನೃತ್ಯಕ್ಕೆ ಗುರು ಕಲಾಯೋಗಿ ಕೆ.ಪಿ. ಸತೀಶ್ ಬಾಬು (ನಟ್ಟುವಾಂಗ ಮತ್ತು ಪ್ರಸಾದನ), ವಿದುಷಿ ಶ್ರೀಮತಿ ವಸುಧಾ ಬಾಲಕೃಷ್ಣ (ಹಾಡುಗಾರಿಕೆ), ವಿದ್ವಾನ್ ಪಿ. ಜನಾರ್ದನ ರಾವ್ (ಮೃದಂಗ), ವಿದ್ವಾನ್ ರಾಕೇಶ್ ಸುಧೀರ್ (ಕೊಳಲು). ವಾದ್ಯಗಳಲ್ಲಿ ಸಹಕಾರ ನೀಡಿದರು. ಮುಖ್ಯ ಅತಿಥಿಗಳಾಗಿ ವಿದ್ವಾನ್ ಜೆ. ಬಿ. ಶರವಣ ಪಿಳ್ಳ್ಯೆ ಆಗಮಿಸಿದ್ದರು.