ಕನ್ನಡ ಸಾಹಿತ್ಯದ ಶ್ರೇಷ್ಠ ವಿಮರ್ಶಕರು ಪ್ರೊ. ಎಲ್. ಎಸ್. ಶೇಷಗಿರಿರಾವ್. ಗ್ರಂಥ ಸಂಪಾದನೆಯನ್ನು ಅತ್ಯಂತ ಮೌಲಿಕವಾಗಿ ಹೊರ ತರುತ್ತಿದ್ದರು. ಭಾರತೀಯ ಸಾಹಿತ್ಯ ಸಮೀಕ್ಷೆ, ಬೆಂಗಳೂರು ದರ್ಶನ, ಸ್ವಾತಂತ್ರೋತ್ತರ ಸಾಹಿತ್ಯ ಮುಂತಾದವುಗಳು ಅವರ ವಿದ್ವತ್ತಿಗೆ ಸಾಕ್ಷಿಯಾಗಿವೆಯೆಂದು ಸಾಹಿತಿ ಹಾಗೂ ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ. ಎನ್. ನರಸಿಂಹಮೂರ್ತಿಯವರು ಮಾರ್ಚ್ 16ರ- ಶನಿವಾರ ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ವೃತ್ತದಲ್ಲಿರುವ ಬಿ.ಎಂ.ಶ್ರೀ. ಪ್ರತಿಮೆ ಎದುರು 'ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ-15' ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನುಡಿದರು.
ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಎಲ್. ಎಸ್. ಶೇಷಗಿರಿರಾವ್ ಕನ್ನಡ ದೀವಿಗೆಯನ್ನು ಹಿಡಿಯುವ ಮೂಲಕ ಕನ್ನಡ ಚಳವಳಿಗೆ ಮೌಲ್ಯವನ್ನು ತಂದುಕೊಟ್ಟರೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ತಿಳಿಸಿದರು. ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಡಾ. ಎಂ. ಚಿದಾನಂದಮೂರ್ತಿ ಅವರ ಜೊತೆ ಜೊತೆಯಲ್ಲಿ ದುಡಿದವರು ಎಲ್.ಎಸ್.ಎಸ್. ಡಾ. ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಶ್ರಮಿಸಿದರು. ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕುವಲ್ಲಿ ಕನ್ನಡ ಭಾಷೆಯ ಪ್ರಾಚೀನತೆಯನ್ನು ಇಂಗ್ಲಿಷ್‌ಗೆ ಅನುವಾದಿಸಿ ಕೊಟ್ಟವರು ಎಲ್.ಎಸ್.ಎಸ್. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕನ್ನಡ ಮತ್ತು ಕನ್ನಡಿಗರ ಉಳಿವಿಗಾಗಿ ದುಡಿದ ಮಹಾನ್ ವ್ಯಕ್ತಿ ಎಂದು ಕೊಂಡಾಡಿದರು. ಈ ವರ್ಷ ಅವರ ಜನ್ಮ ಶತಮಾನೋತ್ಸವದ ವರ್ಷವಾಗಿದ್ದು ಸರ್ಕಾರ ಇವರ ಹೆಸರಿನಲ್ಲಿ ಪ್ರತಿ ವರ್ಷ ನಾಡಿನ ವಿಮರ್ಶಕರೊಬ್ಬರಿಗೆ ಪ್ರಶಸ್ತಿ ನೀಡಿ ಸ್ಮರಿಸುವ ಕಾರ್ಯ ಮಾಡಬೇಕೆಂದರು.
ಬಾ. ಹ. ಉಪೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲೇಖಕ ರಾ.ನಂ. ಚಂದ್ರಶೇಖರ, ಸಾಹಿತಿ ಡಾ. ಆರ್. ಶೇಷಶಾಸ್ತ್ರಿ, ಶ್ರೀಮತಿ ಭಾರತಿ ಶೇಷಗಿರಿರಾವ್ ಉಪಸ್ಥಿತರಿದ್ದರು.