ಪೀಣ್ಯದಾಸರಹಳ್ಳಿ:ಲಘು ಉದ್ಯೋಗ ಭಾರತಿ ವತಿಯಿಂದ ವಿವಿಧ ವಿಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ 4 ಜೀವಮಾನ ಸಾಧನೆ ಹಾಗೂ 29 ಸಾಮಾನ್ಯ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಏಸ್ ಡಿಸೈನರ್ಸ್ ಸಂಸ್ಥಾಪಕ ನಿರ್ದೇಶಕ ರಾಮದಾಸ್,ಬಿಸಿಐಸಿ ಅಧ್ಯಕ್ಷ ಡಾ.ದೇವರಾಜನ್,ಲಘು ಉದ್ಯೋಗ ಭಾರತಿ ಕರ್ನಾಟಕ ಅಧ್ಯಕ್ಷ ಸಚಿನ್ ಬಿ ಸಬಿನ್ಸ್, ಉಪಾಧ್ಯಕ್ಷ ಅಶ್ವಥ್ ನಾರಾಯಣ,
ಬೆಂಗಳೂರು ಶಾಖೆಯ ಅಧ್ಯಕ್ಷ ಸಂಜಯ್ ಭಟ್, ಕಾರ್ಯದರ್ಶಿ ನಾಗರಾಜ್ ಅವರುಗಳು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಕೈಗಾರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಸಾಧನೆಗೈದ ಬನಶಂಕರಿ ಕೆಮಿಕಲ್ಸ್ ನ ಜಿ ಎನ್ ಮೂರ್ತಿ,ಬೆಲ್ ಮೆಕ್ ನ ರಿಚರ್ಡ್ ಡಿ ಸೋಜ,ವರ್ನರ್ ಫಿನ್ ಲೆ ಕಂಪೆನಿಯ ಜೆ ಆರ್ ಗುಂಡೂರಾವ್ ಅವರುಗಳಿಗೆ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಟ್ರ್ಯೂನ್ ಎಕ್ಬಿಟರ್ಸ್ ನ ಸಿರಿಲ್ ಫೆರೆರಾ ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿವಿಧ ವಿಭಾಗಗಳಲ್ಲಿ ಗಣನೀಯ ಸಾಧನೆ ಮಾಡಿದ. 29 ಅತ್ಯುತ್ತಮ ಕೈಗಾರೊಕೋದ್ಯಮಿಗಳಿಗೆ ಎಂಎಸ್ ಎಂಇ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ದೇಶದ ಜಿಡಿಪಿ ಕೇಂದ್ರ ಸರ್ಕಾರದ ನಿರೀಕ್ಷೆಗೂ ಮೀರಿದೆ.ನಾವು ಶೇ.7 ರಿಂದ 7.5 ಯಷ್ಟು ನಿರೀಕ್ಷೆ ಮಾಡಿದ್ದೆವು.ಆದರೆ ಜಿಡಿಪಿ ಶೇ.8.4 ರಷ್ಟು ಜಿಗಿತ ಕಂಡಿದೆ,ಇದು ಇಮ್ಮಡಿಗೊಳ್ಳಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರಲ್ಲದೆ,ಮುಂದಿನ 25 ವರ್ಷಗಳಲ್ಲಿ ಭಾರತ ವಿಶ್ವದ ಮಂಚೂಣಿ ದೇಶಗಳಲ್ಲಿ ಒಂದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ 26 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ ಎಂದ ತೇಜಸ್ವಿ ಸೂರ್ಯ,ಭಾರತೀಯರು ಆರ್ಥಿಕವಾಗಿ ಸದೃಢವಾಗುತ್ತಿದ್ದಾರೆ ಎಂದು ಹೇಳಿದರು.
ಎಚ್ ಎಎಲ್,ಎನ್ ಎಎಲ್ ನಂತಹ ದೊಡ್ಟ ಕಾರ್ಖಾನೆಗಳಂತೆಯೇ ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಎಂಎಸ್ ಎಂಇ ಕೈಗಾರಿಕೆಗಳ ಪಾತ್ರ ಸಹ ಅಷ್ಟೇ ಮುಖ್ಯವಾಗಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಗಂಬೀರ ಪರಿಸ್ಥಿತಿ ಎದುರಾಗಿದ್ದು,ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರದ ಬಳಿ ಆ್ಯಕ್ಷನ್ ಪ್ಲಾನ್ ಆಗಲಿ ಸ್ಪಷ್ಟತೆ ಆಗಲಿ ಇಲ್ಲ ಎಂದು ಆರೋಪಿಸಿದ ಸಂಸದ ತೇಜಸ್ವಿ ಸೂರ್ಯ,ಬೆಂಗಳೂರಿಗೆ ಹತ್ತಿರದಲ್ಲಿ ಯಾವುದೇ ಜಲ ಮೂಲ ಇಲ್ಲದಿರುವದು ಸಮಸ್ಯೆಗೆ ಪ್ರಮುಖ ಕಾರಣ,ಏಷ್ಯಾದಲ್ಲೇ ಕೆಳ ಮಟ್ಟದಿಂದ ಎತ್ತರ ಪ್ರದೇಶದಲ್ಲಿರುವ ನಗರಕ್ಕೆ ನೀರು ಪೂರೈಸಲಾಗುತ್ತಿದೆ ಅಂದರೆ ಅದು ಬೆಂಗಳೂರು ಎಂದು ಹೇಳಿದರು.
ಹಣ ಕೊಡ್ತೀವಿ ಅಂದರೂ ವಾಟರ್ ಟ್ಯಾಂಕರ್ ಗಳು ಸಿಗುತ್ತಿಲ್ಲ,ನಗರದ ಸುಮಾರು 40 ವಾರ್ಡ್ ಗಳಲ್ಲಿ 7 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ.ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರದ ಬಳಿ ಯಾವುದೇ ನೀಲಿನಕ್ಷೆ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಲಘು ಉದ್ಯೋಗ ಭಾರತಿ ಬೆಂಗಳೂರು ಉತ್ತರ ಜಿಲ್ಲೆ ಅಧ್ಯಕ್ಷ ಸಂಜಯ್ ಪಿ ಭಟ್ ಮಾತನಾಡಿ,ಲಘು ಉದ್ಯೋಗ ಭಾರತಿ ವತಿಯಿಂದ ಅತಿ ಸೂಕ್ಷ್ಮ,ಸೂಕ್ಷ್ಮ,ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆಗಳ ರಕ್ಷಣೆ ಹಾಗೂ ಬೆಳವಣಿಗೆಗೆ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.