ಅಯೋಧ್ಯಾ ಬಾಲರಾಮಮಂದಿರದ ಮಂಡಲೋತ್ಸವದ ನೇತಾರರಾದ ಪೇಜಾವರ ಮಠದ ಶ್ರೀ ಶ್ರೀ 1008 ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಬೆಂಗಳೂರು ನಾಗರಿಕರ ಪರವಾಗಿ ಭವ್ಯವಾದ ಪುರಪ್ರವೇಶ ಸ್ವಾಗತ ಹಾಗೂ ಅಭಿವಂದನೆಗಳನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ: 14.3.2024
ಸ್ಥಳ ಮತ್ತು ಸಮಯ:
ಸಂಜೆ 3.30 - ಪಿಇಎಸ್ ಕಾಲೇಜಿನ ಹಿಂಭಾಗದ ನೈಸ್ ರಸ್ತೆಯ ಟೋಲ್ ನ ಬಳಿಯಿಂದ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ವರೆಗೆ ಬೈಕ್ ರ್ಯಾಲಿ.
ಸಂಜೆ 5.00 - ದೊಡ್ಡ ಗಣಪತಿ ದೇವಸ್ಥಾನ ದಿಂದ ಪೂರ್ಣಪ್ರಜ್ಞ ವಿದ್ಯಾಪೀಠದ ವರೆಗೆ ಭವ್ಯ ಶೋಭಾಯಾತ್ರೆ.
ಸಂಜೆ 6.00 - ಸಭಾ ಕಾರ್ಯಕ್ರಮ
ರಾಮಮಂದಿರ - ರಾಷ್ಟ್ರಮಂದಿರ
ಐದು ಶತಮಾನಗಳ ಬಹುಜನರ ಕನಸಾದ ಅಯೋಧ್ಯೆಯ ಬಾಲರಾಮಮಂದಿರ ನನಸಾಗಿದೆ. ದೇಶದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಗಳ ಕೊಡುಗೆಗಳೊಂದಿಗೆ ನಿರ್ಮಾಣಗೊಂಡ ಈ ಮಂದಿರ ನಿಜವಾದ ಅರ್ಥದಲ್ಲಿ ರಾಷ್ಟ್ರ ಮಂದಿರವಾಗಿದೆ. ಅದರಲ್ಲೂ ಈ ಮಂದಿರಕ್ಕೆ ಕರ್ನಾಟಕದ ಸಂಬಂಧ ವಿಶಿಷ್ಟವಾಗಿದೆ. ಪ್ರತಿಮೆ ಮತ್ತು ಪ್ರತಿಮೆಯ ನಿರ್ಮಾತೃ ಕರ್ನಾಟಕದವರು. ಶ್ರೀರಾಮ ತನ್ನ ಸನ್ನಿಧಾನಕ್ಕೆ ಹಾಗೂ ಸೇವೆಗೆ ಆರಿಸಿಕೊಂಡ ಸಂತರು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು. ಜನವರಿ 22ರಂದು ಭಾರತ ದೇಶದ ಪ್ರಧಾನಮಂತ್ರಿಯವರ ಯಜಮಾನತನದಲ್ಲಿ ಭವ್ಯವಾದ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯುವಾಗ ಶ್ರೀವಿಶ್ವಪ್ರಸನ್ನತೀರ್ಥರನ್ನು ಪ್ರಧಾನಿಗಳ ಪಕ್ಕದಲ್ಲಿ ಕಂಡ ಕರ್ನಾಟಕದ ಜನ ಸಂಭ್ರಮ ಪಟ್ಟಿದ್ದರು.
ಪೂಜಾಕೈಂಕರ್ಯ, ಹೋಮ-ಹವನ, ದೇವಾಲಯಗಳಿಗೆ ಹೆಸರುವಾಸಿಯಾದ ಉಡುಪಿ ಪರಿಸರದ ಹಿನ್ನೆಲೆ ಶ್ರೀಪಾದರಿಗೆ ಇದೆ. ಪ್ರತಿಷ್ಠೆಯ ನಂತರ ವಿಶೇಷ ಸನ್ನಿಧಾನಕ್ಕಾಗಿ 48 ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಗಳನ್ನು ನಡೆಸಲು ನಾವು ಸಿದ್ಧ ಎಂಬ ಶ್ರೀಪಾದರ ಸೂಚನೆಯನ್ನು ಮಂದಿರದ ಟ್ರಸ್ಟ್ ಸಂತೋಷದಿಂದ ಒಪ್ಪಿತು. 48 ದಿನಗಳಿಗೆ ಮಂಡಲ ಎಂಬ ಶಬ್ದ ಇರುವುದರಿಂದ ಈ ಉತ್ಸವಕ್ಕೆ ಮಂಡಲೋತ್ಸವ ಎಂಬ ಹೆಸರು ಬಂದಿತು.
ಉತ್ಸವದ ಸ್ವರೂಪ
ಪ್ರತಿ ದಿನ ನಾನಾವಿಧ ಹೋಮಗಳು, ವೇದ-ರಾಮಾಯಣಗಳ ಪಾರಾಯಣಗಳು ಮತ್ತು ಸಂಜೆ ಅಷ್ಟಾವಧಾನ ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವ - ಇವಿಷ್ಟು ಪ್ರಮುಖ ಕಾರ್ಯಕ್ರಮಗಳು.
'ಈ ಮಂದಿರ ಉಳಿದ ಮಂದಿರಗಳಂತೆ ಕೇವಲ ಧರ್ಮಮಂದಿರವಾಗಿರದೆ ರಾಷ್ಟ್ರ ಮಂದಿರವೂ ಆಗಿದೆ. ಸಹಸ್ರಮಾನಗಳ ಭವಿಷ್ಯದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಈ ಮಂದಿರ ಸಾರ್ಥಕವಾಗುವುದು ರಾಮರಾಜ್ಯದ ಕಡೆಗೆ ಸಾಗಿದಾಗ ಮಾತ್ರ' - ಇದು ಶ್ರೀಪಾದರ ಖಚಿತ ನಿಲುವು. ಮಂದಿರದ ಹೊರಗೆ ಕಲ್ಲು ಕಂಡರೆ ಹೃದಯದಲ್ಲಿ ಭಕ್ತಿಭಾವ ಹಾಗೂ ಸಮಸಮಾಜದ ಪರಿಕಲ್ಪನೆಗಳನ್ನು ಈ ಮಂದಿರದ ನಿರ್ಮಾಣದ ಹಿನ್ನೆಲೆಯಲ್ಲಿ ಇರಿಸಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಶ್ರೀಪಾದರು ಈ ಉತ್ಸವಗಳಿಗೆ ಸಮಾಜೋಧಾರ್ಮಿಕ ಹಾಗೂ ಸಮಾಜೋಮಾನಸಿಕ ಆಯಾಮಗಳನ್ನು ನೀಡಿದರು. ಪ್ರತಿಷ್ಠೆಗೆ ಆರು ತಿಂಗಳು ಮೊದಲಿನಿಂದಲೇ ಶ್ರೀರಾಮ ತಾರಕ ಮಂತ್ರವನ್ನು ಜನರಿಂದ ಕೋಟಿಗಟ್ಟಲೆ ಪಾರಾಯಣ ಮಾಡುವಂತೆ ಪ್ರೇರಿಸಲಾಯಿತು. ನೂರು ಜಪಕ್ಕೆ ಒಂದು ಆಹುತಿ ನೀಡಿದಾಗ ಜಪಕ್ಕೆ ವಿಶೇಷ ಶಕ್ತಿ ಬರುವ ಕಾರಣ ಪ್ರತಿ ದಿನ ರಾಮತಾರಕಮಂತ್ರಹೋಮವನ್ನು ನಡೆಸಲಾಯಿತು. ಇದಲ್ಲದೆ ಶಾಸ್ತ್ರ ತಿಳಿಸುವ ಸುಮಾರು ನೂರು ಮಂತ್ರಗಳಿಂದ ಹೋಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಬೇಕಾಗುವ ಸುಮಾರು 500 ಕೆಜಿ ಶುದ್ಧ ದೇಸಿ ಗೋವಿನ ತುಪ್ಪವನ್ನು ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಲಾಗಿತ್ತು.
ಮೊದಲ ನಾಲ್ಕು ಹಾಗೂ ಕೊನೆಯ ನಾಲ್ಕು ದಿನಗಳಲ್ಲಿ ಹೆಚ್ಚಿನ ಧಾರ್ಮಿಕ ಆಚರಣೆಗಳನ್ನು ನಡೆಸಿ ಕೊನೆಯಲ್ಲಿ ಬ್ರಹ್ಮಕಲಶ ಎಂಬ ಹೆಸರಿನ ಸಾವಿರ ಕಲಶಗಳ ಸೇವೆಯನ್ನು ನಡೆಸಲಾಯಿತು.
ಧಾರ್ಮಿಕ ಮ್ಯಾನೇಜ್ಮೆಂಟ್
ಇದಕ್ಕೆ ಪ್ರತಿನಿತ್ಯ ಕನಿಷ್ಠ ಎಂಟು ಜನ, ಕೊನೆಯ ನಾಲ್ಕು ದಿನ 25 ಜನ ಪುರೋಹಿತರು ಪ್ರತಿನಿತ್ಯ ಬೇಕಾಗಿದ್ದರು. ಮಂಗಳ ವಾದ್ಯಗಳನ್ನು ನುಡಿಸುವವರು ಇರಬೇಕಿತ್ತು. ಇದರ ಖರ್ಚು ವೆಚ್ಚಗಳನ್ನು ಊಹಿಸುವುದೂ ಅಸಾಧ್ಯದ ಮಾತು. ತಮ್ಮ ಹಿನ್ನೆಲೆಯಂತೆ ತನು, ಮನ, ಧನಗಳಿಂದ ಜನತೆಗೆ ಸೇವೆ ಮಾಡಲು ಅವಕಾಶ ನೀಡಿ ಉತ್ಸವದ ಹಲವು ವೆಚ್ಚವನ್ನೂ ಟ್ರಸ್ಟ್ ಬದಲು ಭಕ್ತರಿಂದ ಮಾಡಿಸಿ, ಶಾಸ್ತ್ರ, ಗೀತ, ನೃತ್ಯ, ವಾದ್ಯ ಮುಂತಾದ ಹಲವು ಸೇವೆಯನ್ನೂ ಉಚಿತವಾಗಿ ಸಲ್ಲಿಸಲು ಅವಕಾಶ ಇತ್ತು ಭಕ್ತರ ಚಿತ್ತಶುದ್ಧಿ, ಉತ್ಸವದ ವೆಚ್ಚ ನಿರ್ವಹಣೆ ಎರಡನ್ನೂ ಸರಿ ದೂಗಿಸಿದರು. ಈ ಎಲ್ಲಾ ಕಾರ್ಯಗಳು ಧಾರ್ಮಿಕ ಮ್ಯಾನೇಜ್ಮೆಂಟ್ ನ ಹೊಸ ಕೌತುಕ!
ದೇವಾಲಯಗಳ ಉತ್ಸವಗಳು ಧಾರ್ಮಿಕತೆಯ ಜೊತೆಗೆ ಕಲಾಶ್ರೀಮಂತಿಕೆಯನ್ನು ಪೋಷಿಸುತ್ತವೆ. ಆಸಕ್ತ ಪುರೋಹಿತರು ಮತ್ತು ಕಲಾವಿದರು ತಮ್ಮ ಖರ್ಚಿನಲ್ಲಿ ಬಂದು ಶ್ರೀರಾಮನ ಸೇವೆಯನ್ನು ನಡೆಸಬಹುದು ಎಂದು ಶ್ರೀಪಾದರು ಹೇಳಿದ್ದು ಇಂದಿನ ವಾಟ್ಸಾಪ್ ಯುಗದಲ್ಲಿ ವಿವಿಧ ಗುಂಪುಗಳಿಗೆ ತಲುಪಿತು. ಬ್ರಾಹ್ಮಣ ಮತ್ತು ಬ್ರಾಹ್ಮಣೇತರ, ಬ್ರಾಹ್ಮಣರಲ್ಲೂ ಮಾಧ್ವ- ಶ್ರೀವೈಷ್ಣವ-ಸ್ಮಾರ್ತ ಪುರೋಹಿತರು ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳಿಂದ ದಿನಕ್ಕೆ 25ರಂತೆ ತಾವಾಗಿಯೇ ಹೋದರು. ದಿನಕ್ಕೊಂದು ವಾದ್ಯಗಳ ತಂಡ ಸೇವೆಯ ರೂಪದಿಂದ ಅಯೋಧ್ಯೆಗೆ ಹೋಗಿ ಬಂದಿತು. ಕೆಲವೊಮ್ಮೆ ಮೂರು ನಾಲ್ಕು ತಂಡಗಳು ಇರುತ್ತಿದ್ದವು. ದಕ್ಷಿಣ ಭಾರತದ ವಿವಿಧ ವಾದ್ಯಗಳ ನೂರಾರು ಜನ ಸಂಜೆಯ ಅಷ್ಟಾವಧಾನ ಸೇವೆಯಲ್ಲಿ ಪಾಲ್ಗೊಂಡಿದ್ದು ದರ್ಶನಕ್ಕೆ ಬಂದ ಜನರನ್ನು ಮಂತ್ರಮುಗ್ಧಗೊಳಿಸಿತು. ಮೊದಲು ಸಣ್ಣದಾಗಿ ಆರಂಭವಾದ ಉತ್ಸವಕ್ಕೆ ಕ್ರಮೇಣ ಹೊಸ ಹೊಸ ತರಹದ ಮೆರಗುಗಳು ಸೇರಿಕೊಂಡವು. ಕಾಶಿಮಠದ ಭಕ್ತರು ಶ್ರೀ ರಾಮನ ಉತ್ಸವಮೂರ್ತಿಗೆ ಬಂಗಾರದ ಪ್ರಭಾವಳಿ ಮತ್ತು ಬಂಗಾರದ ಪಲ್ಲಕ್ಕಿಗಳನ್ನು ಸಮರ್ಪಿಸಿದರು. ಬೆಳ್ಳಿ ಪಲ್ಲಕ್ಕಿ. ಆಕರ್ಷಕ ಉಯ್ಯಾಲೆ ರಾಜಸ್ಥಾನ ದಿಂದ ಬಂದಿತು. ಹೀಗೆ ಇವರೆಲ್ಲ ಕಾರ್ಯಕ್ರಮವನ್ನು ನಿರೀಕ್ಷೆ ಮೀರಿ ಚಂದಗಾಣಿಸಿದರು. ಶ್ರೀರಾಮ ಇವರೆಲ್ಲರಿಂದ ಸೇವೆಯನ್ನು ಸ್ವೀಕರಿಸಿದ.
ಹೂವಿನ ಅಲಂಕಾರ
ಈ ಎಲ್ಲ ವಿಧದ ಸೇವಕರೊಂದಿಗೆ ದಕ್ಷಿಣದಿಂದ ಹೋಗುತ್ತಿದ್ದ ಬಗೆ ಬಗೆಯ ಹೂಗಳ ಅಲಂಕಾರ, ಉತ್ತರದ ಅಲಂಕಾರಗಳ ಜೊತೆಗೆ ಸೇರಿ ಪ್ರಪಂಚದಾದ್ಯಂತದ ಎಲ್ಲ ರಾಮಭಕ್ತರ ಕಣ್ಣು ಮತ್ತು ಮನಸ್ಸುಗಳನ್ನು ಅರಳಿಸಿತು. ನಗುಮುಖದ ಬಾಲರಾಮನ ಸುಂದರ ಅಲಂಕಾರದ ಭವ್ಯ ವಿಗ್ರಹ ಡಿಜಿಟಲ್ ರೂಪದಲ್ಲಿ ದಾಖಲಾಗಿ ಫೋಟೋಗಳ ಮೂಲಕ ಮನೆ ಮನೆಗಳಲ್ಲಿ ಪ್ರತಿಷ್ಠಿತಗೊಂಡಿದೆ.
ಕ್ರಾಂತಿಕಾರಕ ಆಯಾಮ
ಸಮಾಜದ ಒಂದು ವರ್ಗದಲ್ಲಿ ಇಂದು ಹಣಕ್ಕೆ ಕೊರತೆ ಇಲ್ಲ. ಶಾಲೆ, ಆಸ್ಪತ್ರೆ, ಬಡವರಿಗೆ, ಗೋಶಾಲೆಗಳಿಗೆ ಜನಸಂಗ್ರಹ ಮಾಡಲು ಎಷ್ಟು ಕಷ್ಟವೋ ದೇವಾಲಯಗಳಿಗೆ ಸಂಗ್ರಹ ಮಾಡುವುದು ಅಷ್ಟೇ ಸುಲಭ! ಬೇರೆ ದಾನ ಮಾಡಲು ಹಿಂಜರಿಯುವ ಜನ ದೇವಾಲಯಗಳಿಗೆ ಯಥೇಷ್ಟ ಕೊಡುತ್ತಾರೆ. ಪ್ರತಿಯೊಂದು ದೇವಾಲಯ ಶಾಲೆ-ಆಸ್ಪತ್ರೆಗಳನ್ನು ಪೋಷಿಸಬೇಕು ಎನ್ನುವುದು ಶ್ರೀಪಾದರ ನಿಲುವು, ಪ್ರಾಚೀನ ಭಾರತದ ಸಮೃದ್ಧಿಯ ರಹಸ್ಯವೂ ಕೂಡ. ಈ ಹಿನ್ನೆಲೆಯಲ್ಲಿ ಶ್ರೀಪಾದರು ಮಂಡಲೋತ್ಸವದ ಕಲಶಸೇವೆಗೆ ಕ್ರಾಂತಿಕಾರಕ ಆಯಾಮವನ್ನು ನೀಡಿದರು. ಒಂದು ಲಕ್ಷ ನೀಡಿ ಕಲಶ ಸೇವೆಯನ್ನು ಮಾಡಿಸಿದವರಿಗೆ ಅವರ ಹೆಸರಿನಲ್ಲಿ ಸೇವೆ ನಡೆಸಿದ ನಂತರ ಆ ಕಲಶವನ್ನು ಅವರಿಗೆ ನೀಡಲಾಗುತ್ತದೆ. ಆದರೆ ಇದಕ್ಕೆ ಅರ್ಹತೆಯಾಗಿ ಅವರು 5 ಲಕ್ಷಕ್ಕೆ ಕಡಿಮೆ ಇಲ್ಲದಂತೆ ನಡೆಸಿದ ಸಾಮಾಜಿಕ ಸೇವೆಗೆ ದಾಖಲೆಯನ್ನು ಒದಗಿಸಬೇಕು ಎಂದು ರಾಮಮಂದಿರಟ್ರಸ್ಟ್ ನಿಲುವು ತೆಗೆದುಕೊಳ್ಳಲು ಶ್ರೀಪಾದರು ಪ್ರೇರಿಸಿದರು. ನೂರಾರು ಜನ ವ್ಯಾಪಾರೋದ್ಯಮಿಗಳು, ಶಾಸಕರು, ರಾಜಕಾರಣಿಗಳು, ವಿವಿಧ ಮಠಗಳ ಭಕ್ತರು ಈ ತರಹದ ಸೇವೆಗಳನ್ನು ಸಲ್ಲಿಸಿದರು!! ತಮಗೆ ಗೌರವಾದರಗಳನ್ನು ಸಲ್ಲಿಸಲು ಬರುವ ದೊಡ್ಡ ಸಂಸ್ಥೆಗಳಿಗೆ ಶ್ರೀಪಾದರು ಈ ಕರಾರನ್ನು ಹಾಕುತ್ತಿದ್ದಾರೆ! ಪುರಪ್ರವೇಶದ ಈ ಕಾರ್ಯಕ್ರಮದ ಸಭೆಯಲ್ಲೂ ಕೂಡ ದೊಡ್ಡಮಟ್ಟದಲ್ಲಿ ಸಮಾಜ ಸೇವೆಯನ್ನು ಮಾಡಲಾಗುತ್ತಿದೆ.
ಪಕ್ಷಾತೀತ ಜನಬೆಂಬಲ
ಶ್ರೀಪಾದರಿಗೆ ಸ್ವಾಗತವನ್ನು ಕೋರುವ ಮೂಲಕ ಸಮಾಜ ಸಾರ್ಥಕತೆಯನ್ನು ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ವಿಚಾರ ಮಾಡಿದಾಗ ಇದರ ನೇತೃತ್ವವನ್ನು ವಹಿಸಲು ಪಕ್ಷಾತೀತವಾಗಿ ಜಾತ್ಯತೀತವಾಗಿ ರಾಜಕೀಯ ಜನರು ಮುಂದೆ ಬಂದು ನಡೆಸುತ್ತಿದ್ದಾರೆ. ಇದಕ್ಕಾಗಿ ರಚನೆ ಮಾಡಿದ ಅಭಿವಂದನಾಸಮಿತಿಯಲ್ಲಿ ಎಲ್ಲರೂ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಶುಭ ಸಂಸನೆಯನ್ನು ನಡೆಸಬೇಕು ಎಂದು ಕೇಳಿಕೊಂಡಾಗ ಬೇಲಿ ಮಠದ ಶ್ರೀ ಶಿವಾನುಭವ ಚರಮೂರ್ತಿ ಶ್ರೀ ಶಿವಯೋಗಿ ಸ್ವಾಮೀಜಿಯವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ.
ಈ ಎಲ್ಲ ಕಾರ್ಯಕ್ರಮದ ವಿವರವನ್ನು ಈ ಪತ್ರದ ಜೊತೆಗೆ ಪ್ರತ್ಯೇಕವಾಗಿ ನೀಡಲಾಗಿದೆ.
ತಾವು ಈ ಎಲ್ಲ ಕಾರ್ಯಕ್ರಮಗಳಿಗೆ ಬಂದು ಇದರ ವರದಿಯನ್ನು ತಮ್ಮ ಮಾಧ್ಯಮಗಳಲ್ಲಿ ಮಾಡಿ ಕಾರ್ಯಕ್ರಮದ ಉದ್ದೇಶವನ್ನು ಸಫಲಗೊಳಿಸಲು ವಿನಂತಿಸುವ
ಅಯೋಧ್ಯಾಬಾಲರಾಮಮಂಡಲೋತ್ಸವನೇತಾರ ಪೇಜಾವರಮಠದ ಶ್ರೀವಿಶ್ವಪ್ರಸನ್ನತೀರ್ಥರ ಅಭಿವಂದ ನಾಸಮಿತಿ