ನಾನು ಹೂಸ್ಟನ್ (ಅಮೇರಿಕಾ) ದಲ್ಲಿ ಎರಡು ದಿನದ ಹಿಂದೆ(04/08/23) ಓಪ್ಪನ್ ಹೈಮರ್ ಚಿತ್ರನೋಡಿದೆ. ನಿಜ ಹೇಳಬೇಕೆಂದರೆ ನನಗೆ ಇಂಗ್ಲೀಷ್ ಚಿತ್ರ ಅರ್ಥವಾಗುವುದಿಲ್ಲ. ಅವರ ಉಚ್ಛಾರಣೆ ನನಗೆ ಅಯೋಮಯ ಎನಿಸುವುದು. ಹೈಮರ್ ಬಗ್ಗೆ ನಾನು ಬಾಲ್ಯದಲ್ಲಿ ಕೆಲವು ಸಂಗತಿ ತಿಳಿದಿದ್ದೆ... ಆ ನಂತರ ದೊಡ್ಡವನಾದ ಮೇಲೆ ಬಹಳಷ್ಟು ಓದಿದ್ದೆ(ಕನ್ನಡದಲ್ಲಿ... ಕಾರಣ ನನಗೆ ಇಂಗ್ಲೀಷ್ ಓದು ಅರ್ಥವಾಗುವುದಿಲ್ಲ, ಮಾತನಾಡಲಂತೂ ಬರುವುದೇ ಇಲ್ಲ). ಬಾಂಬ್ ಮ್ಯಾನ್ ಅನ್ನುವ ನಾಯಕೀಯ ನಾಮಧೇಯವನ್ನು ಹಿರೋಷಿಮಾ- ನಾಗಸಾಕಿ ಅವರಿಗೆ ತಂದುಕೊಟ್ಟಿತ್ತು. ಚಿತ್ರದ ಆರಂಭದಿಂದ ಅಂತ್ಯದವರೆಗೂ, ಅರ್ಥವಾಗಿದ್ದು, ಅರ್ಥವಾಗದಿರುವುದು! ಎರಡನ್ನೂ ಒಂದೇ ಕುತೂಹಲದಿಂದ ವೀಕ್ಷಿಸಿದೆ. ಚಿತ್ರದ ಆರಂಭದಲ್ಲಿನ ಅಂಗಳದ ತುಂತುರು ಮಳೆ ಹನಿ ಅಂತ್ಯದ ಕೆರೆಯಲ್ಲಿ (ಅದು ಸಮುದ್ರ ಅನ್ನಿ, ಸರೋವರ ಅನ್ನಿ... ಇನ್ನೇನೇ ಅನ್ನಿ) ಅಂತ್ಯವಾಗಿದ್ದು(ಚಿತ್ರದ ಅಂತ್ಯ) ಕಂಡೆ. ಚಿತ್ರದುದ್ದಕ್ಕೂ ಹೈಮರ್ ರೆಸ್ಟ್! ತೆಗೆದುಕೊಂಡಿದ್ದು ಕಂಡಿಲ್ಲ... (ಸಿಗರೇಟು.. ಕಾಮದಾಹ ತೀರಿಸಿಕೊಳ್ಳುವ ಹೊರತಾಗಿ) ಅವನ ಬದುಕೊಂದು ಸಾಧನೆಯ ಓಟವಾಗಿತ್ತು, ಗುರಿಮುಟ್ಟಿದ ಮೇಲೂ ಅವಮಾನ, ಮಾನಸಿಕ ಹಿಂಸೆ, ಅಪರಾಧಿ ಮನೋಭಾವ, ಪಾಪಭಯ.

ಈ ಜಗತ್ತು, ಜ್ಞಾನಿಗಳು, ವಿಜ್ಞಾನಿಗಳು, ಪ್ರತಿಭಾವಂತರು, ಅನ್ವೇಷಕರುಗಳಿಂದ ತುಂಬಿ ತುಳುಕುತ್ತಿದೆ. ಎಲ್ಲೆಡೆಯೂ ಇರುವುದು ಅವಕಾಶದ ಕೊರತೆ! ಒಂದು ಅವಕಾಶಕ್ಕಾಗಿ ಹೈಮರ್ ಹಪಹಪಿಸಿ ಸಾಧಿಸುತ್ತಾನೆ. ಸ್ವಾರ್ಥಿಗಳ ಹಸ್ತಸೇರಿದ ಅವನ ಸಾಧನೆಯ ಪರಿಣಾಮ ಅಷ್ಟು ಭಯಂಕರವಾಗಿರುತ್ತದೆಂದು ಆತ ಕಲ್ಪಿಸಿಯು ಇರಲ್ಲ. ನಂತರದ ದಿನಗಳಲ್ಲಿ ಆತನ ಬದುಕು, ಮಾನಸಿಕವಾಗಿ ಯಾತನಾಮಯವಾಗಿಯೇ ಪರಿಸಮಾಪ್ತಿಯಾಗುತ್ತದೆ.
ಈ ಚಿತ್ರದಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್ (ಪಾತ್ರಗಳಾಗಿ) ಐನ್ ಸ್ಟನ್ ಮತ್ತು ಹೈಮರ್ ಕಂಡುಬರುತ್ತಾರೆ. ಥಿಯರಿಗಿರುವ ಹೆಸರು, ಗೌರವ ಯೋಗ್ಯತೆ, ಪ್ರಾಕ್ಟಿಕಲ್ ಫೀಲ್ಡ್ ನಲ್ಲಿ ಕಳೆದುಕೊಳ್ಳು ಅಪಾಯ ಇಲ್ಲಿ ಎತ್ತಿ ತೋರಿಸಿದ್ದಾರೆ. ಹೈಮರ್ ಒಬ್ಬ ಮಹಾನ್ ಸಾಧಕ... ಜೊತೆಗೇ ದುರಂತ ನಾಯಕ (ದುರಂತದಲ್ಲಿ ಆತನ ಬದುಕು ಅಂತ್ಯವಾಗದಿದ್ದರೂ, ಪ್ರಪಂಚಕ್ಕೆ ಮುಂದೆ ಒದಗಿ ಬರುವ ಮಹಾನ್ ದುರಂತದ ಭಯದಲ್ಲೇ ಅವನ ಜೀವನ ಅಂತ್ಯವಾದುದು)
ಇಡೀ ಚಿತ್ರ ಸಂವೇದನೆ, ಸಂಶೋಧನೆ, ಸಂಘರ್ಷ, ಸಾಧನೆ, ಮಾನವೀಯ ಸಂಬಂಧ, ರಾಜಕೀಯ, ರಾಜತಾಂತ್ರಿಕ ಸ್ವಾರ್ಥ, ಸುತ್ತ ಅನಾವರಣಗೊಂಡಿದೆ. ಸತ್ಯಕಥೆಯೊಂದು ತೆರೆಯಮೇಲೆ, ತಾನು ತೊಡಗಿಸಿಕೊಳ್ಳಬಹುದಾದ ಸಾಧ್ಯತೆಗಳ ಚೌಕಟ್ಟಿನಲ್ಲಿ ಮೂಡಿ ಬಂದಿದೆ. ನಿರ್ದೇಶಕರು ಈ ವಿಷಯದಲ್ಲಿ ಗೆದ್ದಿದ್ದಾರೆ. ಹೈಮರ್ ಪಾತ್ರಧಾರಿ ಮೂಲ ಹೈಮರ್ ನ ಅನುಕರಿಸಿಲ್ಲ! ನಿಜ ಹೈಮರ್ ಆಗಿದ್ದಾನೆ.
ಭಗವದ್ಗೀತೆಯ ಶ್ಲೋಕ ಆ ಸನ್ನಿವೇಶಕ್ಕೆ ಅನಾವಶ್ಯಕವಾಗಿತ್ತು.. ಬೇಕಾಗಿರಲಿಲ್ಲ. ಈ ಚಿತ್ರದ ನಿರ್ದೇಶಕರು, ಭಗವದ್ಗೀತೆ ಓದಿಕೊಂಡಿದ್ದಾರೆ! ಎಂಬುದು, ಚಿತ್ರದ ಚಿತ್ರಕಥೆ, ನಿರೂಪಣೆಯಲ್ಲಿ ತಿಳಿದುಬರುತ್ತದೆ. ಎಲ್ಲೂ ಒನ್ ಲೈನ್ ಸ್ಟೋರಿ ನಿರೂಪಣೆ ಇಲ್ಲ. ಪ್ಲಾಷ್ ಬ್ಯಾಕ್ ಟೆಕ್ನಿಕ್ ಅರ್ಥಮಾಡಿಕೊಂಡು, ನೋಡಬೇಕು. (ಈ ನಿರ್ದೇಶಕರ ಹಿಂದಿನ ಚಿತ್ರಗಳೂ ಇಂತವೇ)
ಚಿತ್ರ ಚಾರಿತ್ರಿಕ, ಹಾಗೂ ಎಜ್ಯಕೇಟೀವ್ ಆಗಿದೆ. ಚೆನ್ನಾಗಿದೆ. ಒಂದು ಮಹತ್ ಸಾಧನೆ, ಮಾನವನಿಗೆ ಸಾಧಕವೂ ಆಗಬಹುದು, ಪ್ರಪಂಚಕ್ಕೆ ಮಾರಕವೂ ಆಗಬಹುದು ಎಂಬುದನ್ನು ಹಂತ ಹಂತವಾಗಿ ಚಿತ್ರ ಪ್ರತಿಬಿಂಬಿಸುತ್ತದೆ... ಎಚ್ಚರಿಸುತ್ತದೆ.
-ಬ.ಲ.ಸುರೇಶ
ಅಂದು ಅಮೇರಿಕಾದಲ್ಲಿ ಇದ್ದಾಗ ನಾನು ವಿಮರ್ಶಿಸಿದ ಚಿತ್ರ ಇಂದು ಏಳು ಆಸ್ಕರ್ ಪ್ರಶಸ್ತಿ ಪಡೆದಿರುವುದಕ್ಕೆ ಒಂದು ರೀತಿ ಹೆಮ್ಮೆಯೊಂದಿಗೆ... ಖುಷಿಯಾಗಿದೆ.