40 ದಿನ ‘ಧನ್ಯವಾದ ಮೋದಿ’ ಅಭಿಯಾನ: ಸುನೀಲ್ ಕುಮಾರ್

VK NEWS
By -
0

ಬೆಂಗಳೂರು: ಬಿಜೆಪಿ ಕರ್ನಾಟಕ ವತಿಯಿಂದ ಇಂದಿನಿಂದ ‘ಧನ್ಯವಾದ ಮೋದಿ ಅಭಿಯಾನ’ವನ್ನು ಆರಂಭಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಅವರು ತಿಳಿಸಿದರು.



ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ.ರಿಜಾಯ್ಸ್ ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದಲ್ಲಿ ಕರ್ನಾಟಕಕ್ಕೆ ದೊಡ್ಡ ಪ್ರಮಾಣದ ಕೊಡುಗೆಯನ್ನು ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ನೀಡುತ್ತಿದೆ. ಮೋದಿಯವರ ಆಡಳಿತ ಎಂದರೆ ಅದು ಎಲ್ಲ ಆಯಾಮಗಳ, ಯಾವುದೇ ತಾರತಮ್ಯ ಇಲ್ಲದ ಆಡಳಿತ. ಕರ್ನಾಟಕದ ಕೊಡುಗೆಗಳನ್ನು ಗುರುತಿಸಿಕೊಂಡು ಪ್ರತಿದಿನ ಒಂದು-ಎರಡು ಯೋಜನೆಗಳನ್ನು ವಿಡಿಯೋ ಮೂಲಕ ಪರಿಚಯಿಸಿ ‘ಧನ್ಯವಾದ ಮೋದಿ ಅಭಿಯಾನ’ವನ್ನು ಮುಂದಿನ 40 ದಿನಗಳ ಕಾಲ ಮಾಡಲಿದ್ದೇವೆ ಎಂದು ತಿಳಿಸಿದರು.

ಪ್ರತಿ ಯೋಜನೆಯ ಮೂಲಕ ಕರ್ನಾಟಕಕ್ಕೆ ಆದ ಲಾಭವನ್ನು ತಿಳಿಸುವ ಉದ್ದೇಶವಿದೆ. ತನ್ಮೂಲಕ ಇನ್ನಷ್ಟು ಯೋಜನೆಗಳು ಕರ್ನಾಟಕಕ್ಕೆ ಬರಲು ಮತ್ತೊಮ್ಮೆ ಮೋದಿಯವರ ಸರಕಾರ ದೇಶದಲ್ಲಿ ಬರಬೇಕು ಎಂಬುದು ನಮ್ಮ ಆಶಯ ಎಂದರು. ಮೊದಲ ವಿಡಿಯೋವನ್ನು ಅವರು ಇದೇವೇಳೆ ಬಿಡುಗಡೆ ಮಾಡಿದರು.

ಹೊಗೆಮುಕ್ತ ಅಡುಗೆ ಮನೆಯ ‘ಉಜ್ವಲ’ ಸಿಲಿಂಡರ್ ಸಂಪರ್ಕ ಯೋಜನೆ ಕುರಿತ ವಿಡಿಯೋವನ್ನು ಬಿಡುಗಡೆ ಮಾಡಲಾಯಿತು. ಈ ಯೋಜನೆಯಡಿ ಕರ್ನಾಟಕದಲ್ಲಿ 40.70 ಲಕ್ಷ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡಿದ್ದನ್ನು ಗಮನಕ್ಕೆ ತಂದರು. ಇಡೀ ದೇಶದಲ್ಲಿ ಇದರ ಫಲಾನುಭವಿಗಳ ಸಂಖ್ಯೆ 10.5 ಕೋಟಿ ಎಂದು ತಿಳಿಸಿದರು.

ಯುವಕರಿಗಾಗಿ ಸ್ಟಾರ್ಟಪ್ ಇಂಡಿಯಾ ಯೋಜನೆ ಜಾರಿಗೊಳಿಸಿದ್ದು, ಕರ್ನಾಟಕದಲ್ಲಿ 6 ಸಾವಿರ ಯುವತಿಯರು ಸೇರಿ 13,360 ಜನರು ಇದರ ಲಾಭ ಪಡೆದಿದ್ದಾರೆ ಎಂದರು. ಈ ಕುರಿತ ವಿಡಿಯೋವನ್ನೂ ಅನಾವರಣಗೊಳಿಸಲಾಯಿತು. ಗರೀಬ್ ಕಲ್ಯಾಣ್ ಯೋಜನೆಯಡಿ ದೇಶದ 80 ಕೋಟಿ, ಕರ್ನಾಟಕದ 4 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನ ಸಿಗುತ್ತಿದೆ ಎಂದರು. ಕಾಂಗ್ರೆಸ್ ಪಕ್ಷದವರು ತಾವು ಕೊಡುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕರ್ನಾಟಕದಲ್ಲಿÀ 54 ಲಕ್ಷ ಜನ ರೈತರು ಇಲ್ಲಿನತನಕ 12,230 ಕೋಟಿ ಹಣವನ್ನು ಪಡೆದಿದ್ದಾರೆ ಎಂದು ವಿವರಿಸಿದರು.

ಮೋದಿಯವರು 4 ಪ್ರಮುಖ ಪರಿಕಲ್ಪನೆ ಇಟ್ಟುಕೊಂಡಿದ್ದಾರೆ. ಯುವಕರು, ಮಹಿಳೆಯರು, ರೈತರು ಮತ್ತು ಬಡವರ ವರ್ಗಗಳಿಗಾಗಿ ಹಾಗೂ ಅವರ ಕಲ್ಯಾಣಕ್ಕಾಗಿ ದುಡಿಯುವುದಾಗಿ ಉಲ್ಲೇಖಿಸಿದ್ದಾರೆ ಎಂದು ನುಡಿದರು. ಈ ಕ್ಷೇತ್ರಗಳಿಗಾಗಿ ಬೇರೆಬೇರೆ ಕಾರ್ಯಕ್ರಮಗಳನ್ನು ಬಿಜೆಪಿ ಸರಕಾರ ನಿರಂತರವಾಗಿ ನೀಡುತ್ತ ಬಂದಿದೆ ಎಂದು ಹೇಳಿದರು.

ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಸಾಮಾಜಿಕ ಜಾಲತಾಣ ರಾಜ್ಯ ಸಂಚಾಲಕ ಪ್ರಶಾಂತ್ ಮಾಕನೂರು, ರಾಜ್ಯ ವಕ್ತಾರರಾದ ಮೋಹನ್ ವಿಶ್ವ, ಕು. ಸುರಭಿ ಹೊದಿಗೆರೆ ಅವರು ಭಾಗವಹಿಸಿದ್ದರು.

Post a Comment

0Comments

Post a Comment (0)