ಶ್ರೀ ರಾಮನವಮಿ ಹಬ್ಬ

VK NEWS
By -
0

 ಶ್ರೀರಾಮ ಚೈತ್ರ ಮಾಸದ ನವಮಿ ದಿನ ಜನ್ಮ ತಾಳಿದ್ದು. ಈ ದಿನ ಹಿಂದೂಗಳೆಲ್ಲ ಅವನ ಜನನ ದಿನವನ್ನು ತಮ್ಮ ದೊಡ್ಡ ಹಬ್ಬ ಮಾಡಿಕೊಂಡಿದ್ದಾರೆ.

ನಮ್ಮಲ್ಲಿ ಚೈತ್ರದ ಪಾಡ್ಯ ದಿಂದಲೇ ರಾಮನ ರಾಮಾಯಣ ಪಾರಾಯಣ ದೇವಾಲಯಗಳಲ್ಲಿ ನಡೆಯುತ್ತದೆ. ಅಂದಿನಿಂದಲೇ ಶ್ರೀರಾಮ ದೇವರನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸುತ್ತಾರೆ. ದಿನಾಲು ಪಾರಾಯಣ ಭಜನೆ ಮಾಡುತ್ತಾರೆ.

ಶ್ರೀರಾಮ ನವಮಿ ದಿನ ಎಲ್ಲರೂ ಬೆಳಿಗ್ಗೆ ಅಭ್ಯಂಗ ಸ್ನಾನ ಮಾಡಿ ಮಡಿ ವಸ್ತ್ರ ಧರಿಸಿ ನಿತ್ಯ ದೇವರ ಪೂಜೆ, ಶ್ರೀರಾಮನ ಪೂಜೆ ಷೋಡಶೋಪಚಾರ ಸಮೇತ ಮಾಡುತ್ತಾರೆ.ನೈವೇದ್ಯಕ್ಕೆ ಹಣ್ಣುಗಳು, ಕೋಸಂಬರಿ, ಗೊಜ್ಜವಲಕ್ಕಿ, ಗುಲುಪಾವಟೆ, ಪಾನಕ, ಮಜ್ಜಿಗೆ ಇತ್ಯಾದಿ ಇಡುತ್ತಾರೆ. ಈ ದಿನ ಎಲ್ಲರೂ ಫಲಾಹಾರ ಸೇವಿಸುವರು.ಕೆಲವರು ರಾಮನ ಜನ್ಮ ದಿನ ಆಚರಿಸಲು ಹಬ್ಬದಡುಗೆ ಮಾಡುತ್ತಾರೆ.

 ವೈಚಾರಿಕವಾಗಿ ನೋಡಿದರೆ ಇದು ಸಾಮೂಹಿಕವಾಗಿ ಮಾಡುವ ಹಬ್ಬ .ಈ ದಿನ ಭಜನೆ ರಸ್ತೆಗಳಲ್ಲಿ ಕೆಲ ಕಡೆ ಸಾಗುತ್ತದೆ. ಈ ಮಾಸದಲ್ಲಿ ಪಾನಕ, ಹೆಸರುಬೇಳೆ ಕೋಸಂಬರಿ ಸೇವನೆ ಇತ್ಯಾದಿ ದೇಹಕ್ಕೂ ತಂಪು.ಊರಲ್ಲಿನ ಅರವತ್ತಿಗೆ ಊರ ಜನರ ಒಗ್ಗಟ್ಟು ತೋರಿಸುತ್ತದೆ.

ರಾಮ ಎಷ್ಟು ಜನಮಾನಸ್ ಪ್ರಿಯ ಎಂದರೆ, ಮದುವೆಗಳಲ್ಲಿ  ಮನೆಯವರು ಪಟ್ಟಾಭಿ ರಾಮನ ಫೋಟೋ ಗಂಡಿನ ಮನೆಯ ಬಿಡದಿ ಮನೆಯಲ್ಲಿ ಇಡುತ್ತಾರೆ.ರಾಮ ಸೀತೆಯರ ಜೋಡಿ ಎಂದೇ ನಮ್ಮಲ್ಲಿ. ಆದರ್ಶ ದಂಪತಿಗಳನ್ನು ಕರೆಯುವರು.

ಮನೆಯವರೆಲ್ಲ ಪೂಜೆ ನಂತರ ಫಲಾಹಾರ ಸೇವಿಸುತ್ತಾರೆ.ರಾಮನನ್ನು ಮನೆದೇವರಾಗಿ ಉಳ್ಳವರು ಈ ದಿನ ವಸಂತ ಸೇವೆ ಅಂದರೆ ಪಾನಕ ಪನಿವಾರದ ಸೇವೆ ಮಾಡುತ್ತಾರೆ.ಮುತ್ತೈದೆಯರನ್ನು ಕರೆದು ಕೋಸಂಬರಿ ಪಾನಕ ಹಂಚುತ್ತಾರೆ.ಊರ ಜನ ಅರವತ್ತಿಗೆ ಸ್ಥಾಪಿಸಿ ಎಲ್ಲರಿಗೂ ಪ್ರಸಾದ ಹಂಚುತ್ತಾರೆ.

ದೇವಾಲಯದಲ್ಲಿ ಮರುದಿನ ರಾಮನ ಪಟ್ಟಾಭಿಷೇಕ ನೆರವೇರಿಸಿ ಊರಿನ ಜನರಿಗೆ ಊಟ ಹಾಕುತ್ತಾರೆ.ಕೆಲ ಕಡೆ ಯುಗಾದಿ ಸಂದರ್ಭದಲ್ಲಿ ತೆಗೆದುಕೊಳ್ಳುವ ದಾನ ಈ ಸಮಯ ಉಪಯೋಗಿಸುವುದಿದೆ.ಮಿಕ್ಕಂತೆ ರಾಮನ ಭಜನೆ ಪ್ರತಿ ಭಾನುವಾರ ಮಾಡುವವರು ಆಗ ಸಿಗುವ ಅಕ್ಕಿ ಬೆಲ್ಲ ಇತ್ಯಾದಿ ರಾಮೋತ್ಸವದ ಅನ್ನ ಸಂತರ್ಪನೆಗೆ ಬಳಸುವುದಿದೆ.

ಕೆಲ ಕಡೆ ರಾಮಾಯಣದ ಕಥೆ ಹೇಳುವ ಸ್ಪರ್ಧೆ ಮಕ್ಕಳಿಗೆ ಇಡುತ್ತಾರೆ.

ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಜಿಲ್ಲೆಯ ಆಚರಣೆ ತಿಳಿಸುತ್ತದೆ.ಉಳಿದಂತೆ ಇದು ಅವರವರ ಮನೆಯ ಹಿರಿಯರ ಆಚರಣೆಯಂತೆ ಇರುತ್ತದೆ.

ರಾಧಿಕಾ ಜಿ ಎನ್ 

ಟೀವೀ ಹೋಸ್ಟ್ 

brahmies@gmail.com



Post a Comment

0Comments

Post a Comment (0)