ಸೈಬರ್ ಅಪರಾಧಗಳ ತಡೆಗೆ ಹೆಚ್ಚು ಒತ್ತು ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ದ ಕಾನೂನಿನ ರೀತ್ಯಾ ಮುಲಾಜಿಲ್ಲದೆ ಕಟ್ಟುನಿಟ್ಟನ ಕ್ರಮ ತೆಗೆದುಕೊಳ್ಳಲಾಗುವುದು. ಪ್ರತಿ ಪೊಲೀಸ್ ಠಾಣೆಯಲ್ಲೂ ಸಾಮಾಜಿಕ ಜಾಲತಾಣ ನಿಗಾ ಘಟಕ ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಗಲಭೆ ಸೃಷ್ಟಿಸುವವರ ವಿರುದ್ದ ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನಿ ರೀತ್ಯ ಕ್ರಮ ಕೈಗೊಂಡು ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಎಕ್ಸ್, (ಟ್ವಿಟ್ಟರ್) ಇನ್ಸ್‍ಟಾಗ್ರಾಮ್, ಯೂ ಟ್ಯೂಬ್ ಚಾನೆಲ್‍ಗಳ ಮೇಲೆ ನಿಗಾ ವಹಿಸಲು ರಾಜ್ಯಾದ್ಯಂತ ಪ್ರತ್ಯೇಕ ಸಾಮಾಜಿಕ ಜಾಲತಾಣ ನಿಗಾ ಘಟಕಗಳನ್ನು (ಎಸ್.ಎಂ.ಎಂ.ಸಿ) ಜಿಲ್ಲಾ ಮಟ್ಟದಲ್ಲಿ ಹಾಗೂ ಪ್ರತಿ ಪೊಲೀಸ್ ಠಾಣೆಗಳಲ್ಲೂ ಪ್ರಾರಂಭಿಸಿ ಸೂಕ್ತ ತರಬೇತಿ ಪಡೆದ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಸದರಿ ಘಟಕವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಯೂಟ್ಯೂಬ್ ಚಾನಲ್‍ಗಳಲ್ಲಿ ಪ್ರಸಾರವಾಗುವ ಪ್ರಚೋದನಕಾರಿ ಸಂದೇಶಗಳ / ಸುಳ್ಳು ಸುದ್ದಿಗಳ / ದ್ವೇಷ ಭಾಷಣಗಳ ಮೇಲೆ ಸಮಾಜದ ಸಮರಸ್ಯ ಹಾಳು ಮಾಡುವಂತವರ ಮೇಲೆ ನಿರಂತರವಾಗಿ ನಿಗಾವಹಿಸಲಾಗುತ್ತಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಸಾಮರಸ್ಯ ಹಾಳು ಮಾಡುವವರ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಸಾಮರಸ್ಯ ಹಾಳು ಮಾಡುವವರ ವಿರುದ್ದ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿದ್ದು, ಪೊಲೀಸ್ ಅಧಿಕೃತ ಖಾತೆಗಳಾದ ಫೇಸ್ ಬುಕ್, ಎಕ್ಸ್, (ಟ್ವಿಟ್ಟರ್) ಇನ್ಸ್‍ಟಾಗ್ರಾಮ್, ಯೂ ಟ್ಯೂಬ್ ಚಾನೆಲ್‍ಗಳ ಮೂಲಕ ಸಾರ್ವಜನಿಕರಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಬೇಜವಾಬ್ದಾರಿಯಿಂದ ದುರುಪಯೋಗಪಡಿಸಿಕೊಂಡು ಸಮಾಜದ ಸಾಮರಸ್ಯ ಹಾಳುಮಾಡಿ ಗೊಂದಲ ಹುಟ್ಟುಹಾಕುವಂತಹ ಸಮಾಜ ವಿರೋಧಿ ಶಕ್ತಿಗಳಿಂದ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕರಲ್ಲಿ ಅರಿವು ಕಾರ್ಯಕ್ರಮಗಳನ್ನು ಕೈಗೊಂಡು ಜಾಗೃತಿ ಮೂಡಿಸಲಾಗುತ್ತಿದೆ.
ಸುಳ್ಳು ಸುದ್ದಿಗಳ ಬಗ್ಗೆ ಕೆ.ಎಸ್.ಪಿ ಫ್ಯಾಕ್ಟ್‍ಚೆಕ್ ಆ್ಯಪ್ ಮೂಲಕ ಫ್ಯಾಕ್ಟ್‍ಚೆಕ್ ಮಾಡಿಸಿ ನೈಜ ಮಾಹಿತಿಯನ್ನು ಇಲಾಖೆಯ ಅಧಿಕೃತ ಜಾಲತಾಣದ ಮೂಲಕ ಮಾಹಿತಿಯನ್ನು ಹಂಚಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ನಿಗಾವಣೆಯಲ್ಲಿ ಕಂಡುಬರುವ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಪೋಸ್ಟ್‍ಗಳನ್ನು ಕೂಡಲೇ ಅಧಿಕಾರಿಗಳ ಹಾಗೂ ರಾಜ್ಯ ಸಾಮಾಜಿಕ ಜಾಲತಾಣ ನಿಗಾ ಘಟಕದ ಗಮನಕ್ಕೆ ತರಲಾಗುತ್ತದೆ. ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಪೊಲೀಸ್ ಇಲಾಖೆಯು ಯಾವುದೇ ಹೆಚ್ಚುವರಿ ಹಣವನ್ನು ಭರಿಸುತ್ತಿಲ್ಲ ಹಾಗೂ ನಿರ್ವಹಣೆಯನ್ನು ಖಾಸಗಿಯವರಿಗೂ ಸಹ ವಹಿಸಿರುವುದಿಲ್ಲ ಎಂದು ತಿಳಿಸಿದರು.
ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಈ ಸಂಬಂಧ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಯನ್ನು ಪ್ರತ್ಯೇಕವಾಗಿ ಸೃಜಿಸಲಾಗಿದೆ. ಡಿ.ಜಿ. ಅವರ ಕೆಳಗೆ ಎ.ಡಿ.ಜಿ.ಪಿ, ಐ.ಜಿ.ಪಿ ಹಾಗೂ 7 ಜನ ಎಸ್.ಪಿಗಳು ಸೇರಿದಂತೆ, ಇತರೆ ಪೊಲೀಸ್ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ. ಸೈಬರ್ ಅಪರಾಧಗಳ ಬಗ್ಗೆ ದೂರುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.