ವಿಧಾನಸಭೆಯಲ್ಲಿ ವಿಧೇಯಕಗಳ ಅಂಗೀಕಾರ

VK NEWS
By -
0

ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧಿನಿಯಮ, 2025 ವಿಧೇಯಕವನ್ನು ಮುಖ್ಯಮಂತ್ರಿಗಳ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ತಿಳಿಸಿದರು.

ಇಂದು ವಿಧಾನಸಭೆಯಲ್ಲಿ ಹೆಚ್.ಕೆ. ಪಾಟೀಲ್ ರವರು ವಿಧೇಯಕದ ಕುರಿತು ಸದನದಲ್ಲಿ ಪ್ರಸ್ತಾಪಿಸುತ್ತಾ ಕಿರುಸಾಲ, ಸಣ್ಣ ಸಾಲ, ಖಾಸಗಿ ಹಣಕಾಸು ಮತ್ತು ಇತರೆ ಅನಿಯಂತ್ರಿತ ಲೇವಾದೇವಿ ಮಾಫಿಯಾಗಳು ಸಾಲಗಾರ ಸಮೂಹಗಳಾದಂತಹ ಬಡ ಗ್ರಾಮೀಣ ನಿರ್ಗತಿಕರು, ನಗರ ಕಾರ್ಮಿಕರು, ಸಮಾಜದ ಅಶಕ್ತ ಮತ್ತು ದುರ್ಬಲ ವರ್ಗದವರನ್ನು ಪೀಡಿಸುತ್ತಿವೆ ಮತ್ತು ಉಸಿರುಗಟ್ಟಿಸುತ್ತಿವೆ. ಸಾಲಗಾರನಿಗೆ ಬಡ್ಡಿಯ ಕುರಿತಂತೆ ಕೆಲವೊಮ್ಮೆ ದುಪ್ಪಟ್ಟು ಮೊತ್ತವನ್ನು ಅಥವಾ ಹೆಚ್ಚಿನ ಬಡ್ಡಿಯ್ನು ಪಾವತಿಸಲು ಒತ್ತಾಯಿಸಲಾಗುತ್ತಿದೆ. ಲೇವಾದೇವಿದಾರರ ಕಾರಣದಿಂದಾಗಿ ಸಾಲಗಾರರು ಬೀದಿಗೆ ಬರುವಂತೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಪಡಿಸಲಾಗುತ್ತಿದೆ. ಪ್ರಸ್ತಾವಿತ ಶಾಸನವು ಸಾಲಗಳನ್ನು ಪಡೆಯುವ ಮತ್ತು ನಂತರ ಸಾಲಗಳಲ್ಲಿಯೇ ಮುಳುಗಿಹೋಗಿರುವ ಅಸಹಾಯಕರನ್ನು ಕಾಪಾಡುವ ಮತ್ತು ರಕ್ಷಿಸುವ ಕುರಿತಾಗಿದೆ.

ಪ್ರಸ್ತಾವಿತ ಶಾಸನವು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು, ರೈತರಿಂದ ಕೃಷಿ ಉತ್ಪನ್ನಗಳನ್ನು ಪಡೆದು ಕೃಷಿ ಸರಕುಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿರುವ ಅಥವಾ ಬಡವರಿಗೆ ಸಾಲವನ್ನು ನೀಡುವ ಮತ್ತು ಅಸಲನ್ನಡು ಬಡ್ಡಿಯೊಂದಿಗೆ ನಗದು ಅಥವಾ ವಸ್ತು ರೂಪದಲ್ಲಿ ತೆಗೆದುಕೊಳ್ಳುವ ಲೇವಾದೇವಿದಾರರು ಅಥವಾ ಅಂಗಡಿ ಅಥವಾ ವಾಣಿಜ್ಯ ಸಂಸ್ಥೆ ಅಥವಾ ಅಮಾನವೀಯ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳು ವಿಶೇಷವಾಗಿ ಮಹಿಳೆಯರು ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳನ್ನು ರಕ್ಷಿಸಲು ಹಾಗೂ ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳನ್ನು ನಿಯಂತ್ರಿಸಲು ಪರಿಣಾಮಕಾರಿಯಾದ ಕಾರ್ಯವ್ಯವಸ್ಥೆಯನ್ನು ಸೃಜಿಸುವ ಉದ್ದೇಶಕ್ಕಾಗಿ ರೂಪುಗೊಳಿಸಿರುವ ವಿಧೇಯಕವಾಗಿದೆ. ಈ ಕುರಿತು ಸಚಿವಸಂಪುಟದಲ್ಲಿ ಸುದೀರ್ಘವಾಗಿ ಚರ್ಚಿಸಿ ಪ್ರತಿಬಂಧಕ ಕಾಯಿದೆಯನ್ನು ತರುವುದು ಸೂಕ್ತವೆಂದು ತೀರ್ಮಾನಿಸಿ ಸದರಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ವಿಧಾನಸಭೆಯ ಎಲ್ಲಾ ಸದಸ್ಯರು ಸದರಿ ವಿಧೇಯಕವನ್ನು ಪರ್ಯಾಲೋಚಿಸಿ ವಿಧೇಯಕವನ್ನು ಅಂಗೀಕರಿಸಲು ಬೆಂಬಲವನ್ನು ನೀಡಬೇಕೆಂದು ಕೋರಿದರು.

ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧಿನಿಯಮ, 2025 ವಿಧೇಯಕ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಉಪನಾಯಕರು, ಬೆಲ್ಲದ್, ಲಕ್ಷ್ಮಣ್ ಸವದಿ, ರಂಗನಾಥ್ ಇನ್ನಿತರ ಸದಸ್ಯರು ವಿಧೇಯಕದ ಕುರಿತು ಸದನದಲ್ಲಿ ಮಾತನಾಡಿ ವಿಧಾನಸಭೆಯ ಎಲ್ಲಾ ಸದಸ್ಯರು ವಿಧೇಯಕದ ಅಂಗೀಕಾರಕ್ಕೆ ಒಮ್ಮತದ ಬೆಂಬಲ ಸೂಚಿಸಿದ ನಂತರ ವಿಧೇಯಕವು ಅಂಗೀಕಾರಗೊಂಡಿತು.

ವಿಧಾನಸಭೆಯಲ್ಲಿ ವಿಧೇಯಕಗಳ ಅಂಗೀಕಾರ

ಕರ್ನಾಟಕ ಗಿರವಿದಾರರ (ತಿದ್ದುಪಡಿ) ಅಧಿನಿಯಮ 2025, ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿμÉೀಧ (ತಿದ್ದುಪಡಿ) ಅಧಿನಿಯಮ 2025, ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ಅಧಿನಿಯಮ 2025) ವಿಧೇಯಕಗಳನ್ನು ಸಹಕಾರ ಸಚಿವ ಕ್ಯಾತ್ಸಂದ್ರ ಎನ್ ರಾಜಣ್ಣ ಅವರು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ವಿಧಾನಸಭೆಯಲ್ಲಿ ಕೋರಿದರು. ವಿಧಾನಸಭೆಯ ಸದಸ್ಯರು ಮೂರು ವಿಧೇಯಕಗಳನ್ನು ಪರ್ಯಾಲೋಚಿಸಿ ವಿಧೇಯಕಗಳಿಗೆ ಒಮ್ಮತದ ಬೆಂಬಲ ವ್ಯಕ್ತಪಡಿಸಿದ ನಂತರ ವಿಧೇಯಕಗಳು ಅಂಗೀಕೃತವಾಯಿತು.

ಜೈನ್ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು-ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್

ಜೈನ್ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಪ್ರತ್ಯೇಕ ಜೈನ್ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ. ಜೈನ್ ಸಮಾಜವು ಆರ್ಥಿಕವಾಗಿ ಹಿಂದುಳಿದಿದ್ದು, ಜೈನ್ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ, ವಕ್ಫ್, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ವಿಧಾನಸಭೆಯಲ್ಲಿ ಅಥಣಿ ವಿಧಾನಸಭಾ ಸದಸ್ಯರಾದ ಲಕ್ಷ್ಮಣ್ ಸಂಗಪ್ಪ ಸವದಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಜೈನ್ ಸಮುದಾಯದವರ ಕುರಿತು ಸರ್ವೆ ನಡೆಸಲಾಗಿದೆ. 20 ಲಕ್ಷಕ್ಕಿಂತ ಹೆಚ್ಚು ಜೈನ್ ಸಮುದಾಯದ ಜನಸಂಖ್ಯೆಯಿದ್ದು, ಪ್ರತ್ಯೇಕ ಜೈನ್ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಲಾಗಿದ್ದು ಈ ಕುರಿತು ಪ್ರಸ್ತಾವನೆಯನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು.

ಸಾಗುವಳಿ ಚೀಟಿ ಕೋರಿ ಬಗರ್ ಹುಕಂ ನಮೂನೆ-53 ರಡಿ ಬಾಕಿ ಅರ್ಜಿಗಳ   ಆನ್ ಲೈನ್ ತಂತ್ರಾಂಶದಲ್ಲಿ ಅಳವಡಿಕೆಗೆ ಕ್ರಮ-ಸಚಿವ ಕೃಷ್ಣ ಬೈರೇಗೌಡ

ನಮೂನೆ 50 ಮತ್ತು 53ರಡಿ ಸಾಗುವಳಿ ಚೀಟಿ ಕೋರಿ ಬಗರ್ ಹುಕಂ ಸಮಿತಿಗೆ ಸಲ್ಲಿಕೆಯಾಗಿರುವ ಹಾಗೂ ವಿವಿಧ ಹಂತಗಳಲ್ಲಿ ವಿಲೇವಾರಿಯಾಗದೇ ಬಾಕಿ ಉಳಿದಿರುವ 247 ಅರ್ಜಿಗಳನ್ನು ಆನ್‍ಲೈನ್ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಕಡೂರು ಶಾಸಕರಾದ ಆನಂದ್ ಕೆ.ಎಸ್ ಇವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ನಮೂನೆ 50 ಮತ್ತು 53ರಡಿ ಸಲ್ಲಿಕೆಯಾದ ಒಟ್ಟು 247 ಅರ್ಜಿಗಳನ್ನು ಈಗಾಗಲೇ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಲಾಗಿದೆ. ನಿಯಮ 108ರಡಿ ತಪ್ಪಾಗಿದ್ದರೆ ಮರು ಪರಿಶೀಲನೆ ಮಾಡಲಾಗುವುದು. ಒಂದು ವೇಳೆ ಅರ್ಜಿಗಳನ್ನು ಪರಿಗಣಿಸಿಯೇ ಇಲ್ಲ ಎಂಬುದಾಗಿದ್ದರೆ ಜಿಲ್ಲಾಧಿಕಾರಗಳ ವರದಿ ಪಡೆದು ಮರು ಪರಿಶೀಲಿಸಲಾಗುವುದು. ತಿರಸ್ಕøತಗೊಂಡ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಲು ಸಾಧ್ಯವಿರುವುದಿಲ್ಲ. ಅಂತಹ ಅರ್ಜಿದಾರರು ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ಮೇಲ್ಮನವಿ ಸಲ್ಲಿಸಿದ ನಂತರ ತಪ್ಪುಗಳಾಗಿದ್ದಲ್ಲಿ ಮರು ಪರಿಶೀಲಿಸಲಾಗುವುದು. ಮೇಲ್ಮನವಿ ಸಲ್ಲಿಸದ ಹೊರತು ಅರ್ಜಿಗಳನ್ನು ಮರು ಪರಿಶೀಲಿಸಲು ಸಾಧ್ಯವಿರುವುದಿಲ್ಲ ಎಂದು ವಿಧಾನಸಭೆಯಲ್ಲಿ ಉತ್ತರಿಸಿದರು.

ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಕ್ರಮ- ಸಚಿವ ಕೆ.ವೆಂಕಟೇಶ್

ಪಶು ಸಂಗೋಪನೆ ಇಲಾಖೆಯಲ್ಲಿ ಖಾಲಿಯಿರುವ 400 ಪಶು ವೈದ್ಯಾಧಿಕಾರಿಗಳನ್ನು ಕರ್ನಾಟಕ ಲೋಕ ಸೇವಾ ಆಯೋಗದ ಮುಖಾಂತರ ಭರ್ತಿ ಮಾಡಲು ಕ್ರಮ ವಹಿಸಲಾಗಿದ್ದು, ದಿನಾಂಕ: 08-04-2025 ರಿಂದ 09-4-2025ರವರೆಗೆ ಪರೀಕ್ಷೆಗಳನ್ನು ನಡೆಸಲು ತಾತ್ಕಾಲಿಕವಾಗಿ ದಿನಾಂಕಗಳನ್ನು ನಿಗದಿಪಡಿಸಲಾಗಿರುತ್ತದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ತಿಳಿಸಿದರು.

ಇಂದು ವಿಧಾನ ಸಭೆಯಲ್ಲಿ ಪ್ರಶ್ತೋತ್ತರ ವೇಳೆಯಲ್ಲಿ ಗುರುಮಿಠಕಲ್ ಕ್ಷೇತ್ರದ ಶರಣಗೌಡ ಕಂದಕೂರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ಭರ್ತಿ ಮಾಡುವವರೆಗೂ ಗುತ್ತಿಗೆ ಆಧಾರದಲ್ಲಿ ಪಶುವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ. 360 ಪಶು ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಕಲ್ಯಾಣ ಕರ್ನಾಟಕ ಅನುಚ್ಛೇದ-371(ಜೆ)ರಡಿ 32 ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗಳಿಗೆ ವಿಶೇಷ ನೇಮಕಾತಿಯಡಿ ನೇಮಕಾತಿ ಮಾಡಿಕೊಳ್ಳಲು ಕ್ರಮ ವಹಿಸಲಾಗಿದ್ದು, 27 ಅರ್ಹ ಅಭ್ಯರ್ಥಿಗಳಿಗೆ ಆದೇಶವನ್ನು ನೀಡಲಾಗಿದೆ. ಉಳಿದ 5 ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರಗಳ ವರದಿ ಬಂದ ನಂತರ ಆದೇಶ ಪತ್ರ ನೀಡಲಾಗವುದು. 700 ಡಿ ದರ್ಜೆ ನೌಕರರನ್ನು ಹೊರಗುತ್ತಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಪ್ರಸ್ತಾವನೆಯು ಪರಿಶೀಲನೆಯಲ್ಲಿರುತ್ತದೆ. ಯಾದಗಿರಿ ಜಿಲ್ಲೆಯಲ್ಲಿ 60 ಡಿ ದರ್ಜೆ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬೀಳು ರೆಸ್ಟೋರ್ ಮಾಡುವ ಕುರಿತು ನಿಯಮಾನುಸಾರ ಕ್ರಮ-ಸಚಿವ ಕೃಷ್ಣ ಬೈರೇಗೌಡ

ಷಡಾ/ಬೀಳು ಜಮೀನುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ನಿಯಮಗಳು, 1966 ನಿಯಮ 119(2)ಕ್ಕೆ ತಿದ್ದುಪಡಿ ಮಾಡಿ ಅವಧಿ ವಿಸ್ತರಿಸಿರುವ ಕುರಿತು ದಿನಾಂಕ: 23-02-2023ರಂದು ಆರ್‍ಡಿ 17 ಎಲ್‍ಜಿಪಿ 2023ರ ಮೂಲಕ ಕರಡು ನಿಯಮಗಳ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅಂತಿಮ ಅಧಿಸೂಚನೆಯನ್ನು ಹೊರಡಿಸಿದ ನಂತರ ಬೀಳು ರೆಸ್ಟೋರ್ ಮಾಡುವ ಕುರಿತು ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.

ಇಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಸದಸ್ಯರಾದ ರವಿಕುಮಾರ್ (ಗಣಿಗ) ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು ದಿನಾಂಕ: 07-12-2012 ರಿಂದ 6-09-2014 ರವರೆಗೆ ಕರ್ನಾಟಕ ಭೂ ಕಂದಾಯ ನಿಯಮಗಳಯ 1966ರ ನಿಯಮ 119ಕ್ಕೆ ತಿದ್ದುಪಡಿ ಮಾಡಿ ಜಿಲ್ಲಾಧಿಕಾರಿಗಳಿಗೆ ಬೀಳು ರಿಸ್ಟೋರ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಸರ್ಕಾರದ ಅಧಿಸೂಚನೆಯ ಹಿನ್ನೆಲೆಯಲ್ಲಿ 7-12-2022 ರಿಂದ 6-9-2014ರವರೆಗೆ ಬೀಳು ರೆಸ್ಟೋರ್ ಆದೇಶವಾಗಿರುವ ಪ್ರಕರಣಗಳಿಗೆ ಭೂಮಿ ತಂತ್ರಾಂಶದಲ್ಲಿ ಬೀಳು/ಫಡಾ ರೆಸ್ಟೋರ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಹಾಗೆಯೇ ಪುನರ್ ಸ್ಥಾಪನೆಗೆ ಆದೇಶವಾಗಿ ಮ್ಯುಟೇಷನ್ ಪ್ರಕ್ರಿಯೆಗಳಿಗೆ ಬಾಕಿ ಇರುವ ಪ್ರಕರಣಗಳಿಗೆ ಮಾತ್ರ ಭೂಮಿ ತಂತ್ರಾಂಶವನ್ನು ಬಳಸಲು ನಿರ್ದೇಶಿಸÀಲಾಗಿರುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ವಿಲೇ ಮಾಡುವುದಕ್ಕೆ ಕ್ರಮ ವಹಿಸಲಾಗುವುದು. ಹಾಲಿ ಸಾಗುವಳಿ ಮಾಡದೇ ಇರುವವರು ಸಹ ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಅರ್ಜಿದಾರರ ಸ್ಥಿತಿಗತಿಗಳನ್ನು ಪರಿಶೀಲಿಸಿ ನೈಜ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದು ವಿಧಾನಸಭೆಯಲ್ಲಿ ತಿಳಿಸಿದರು.

Post a Comment

0Comments

Post a Comment (0)