ನಮ್ಮ ದೇಶದಲ್ಲಿ ಅತಿಯಾದ ಮೈದಾ ಹಿಟ್ಟು ಹಾಗೂ ಸಕ್ಕರೆ ಬಳಕೆಯಿಂದ ಶೇಕಡಾ 13.85 ಜನರಲ್ಲಿ ಸ್ಥೂಲಕಾಯ, ಶೇಕಡಾ 8.3 ರಷ್ಟು ಜನರಿಗೆ ಸಕ್ಕರೆ ಕಾಯಿಲೆ ಹಾಗೂ ಶೇಕಡಾ 7.4 ರಷ್ಟು ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬರÀುತ್ತಿವೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮೈದಾ ಹಾಗೂ ಸಕ್ಕರೆ ಮುಕ್ತ ಬೇಕರಿ ಪದಾರ್ಥಗಳನ್ನು ತಯಾರಿಸಲು ಸಂಶೋಧನೆಗಳನ್ನು ಕೈಗೊಳ್ಳುತ್ತಿದೆ, ಬೇಕರಿ ಉತ್ಪನ್ನಗಳಲ್ಲಿ ಸಕ್ಕರೆಯ ಬದಲಿಗೆ ಜೇನುತುಪ್ಪವನ್ನು ಬಳಸುವಂತಾಗಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ ತಿಳಿಸಿದರು.
ಇಂದು ಕೃಷಿ ವಿಶ್ವವಿದ್ಯಾನಿಲಯ ಜಿ.ಕೆ.ವಿ.ಕೆ. ಆವರಣದಲ್ಲಿ ಆಯೋಜಿಸಿದ್ದ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯಿಂದ 14 ವಾರದ ಬೇಕರಿ ತಂತ್ರಜ್ಞಾನ ಕುರಿತು ಸರ್ಟಿಫಿಕೇಟ್ ಕೋರ್ಸ್‍ನ ಪದವಿ ಪಡೆದ ಶಿಭಿರಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು, ಬೇಕರಿ ಆಧಾರಿತ ನವೀನ ಉತ್ಪನ್ನಗಳ ತಯಾರಿಕೆ, ಕೇಕ್ ತಯಾರಿಕೆ ಹಾಗೂ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸಿರಿಧಾನ್ಯಗಳಿಂದ ತಯಾರಿಸಬಹುದಾದ ಬೇಕರಿ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಅದರಲ್ಲೂ ಮಹಿಳೆ ಹಾಗೂ ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಲು ಪೌಷ್ಠಿಕ ಲಡ್ಡನ್ನು ತಯಾರು ಮಾಡಲಾಗಿದೆ. ಬೇಕರಿ ಪದಾರ್ಥಗಳು ನಮ್ಮ ದೈನಂದಿನ ಬದುಕಿನಲ್ಲಿ ಉಪಯೋಗಿಸುವ ಪದಾರ್ಥಗಳಲ್ಲಿ ಅವಿಭಾಜ್ಯ ಅಂಗವಾಗಿದೆ. ಇದಕ್ಕೆ ಮುಖ್ಯ ಉದಾಹರಣೆಯೆಂದರೆ ಮೆಡಿಕಲ್ ಸ್ಟೋರ್ ಹಾಗೂ ಬೇಕರಿಯಲ್ಲಿ ಮಾತ್ರ ನಾವು ಯಾವುದೇ ಚೌಕಾಸಿ ಮಾಡದೆ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಿದ್ದೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಬೇಕರಿ ಉದ್ಯಮವು ಉತ್ತಮ ವೇದಿಕೆಯಾಗಿದ್ದು ಕ್ಲೌಡ್ ಕಿಚನ್ ರೀತಿಯ ಹಾಗೆ ಕ್ಲೌಡ್ ಬೇಕರಿಯನ್ನು ನಿರ್ಮಿಸಿ ನವೋದÀ್ಯಮಕ್ಕೆ ನಾಂದಿಯಾಡಬಹುದಾಗಿದೆ. ಸುಸ್ಥಿರ ಉದ್ದಿಮೆಗಾಗಿ ಮೊದಲು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಅನುಭವವನ್ನು ಪಡೆದುಕೊಂಡ ನಂತರ ದೊಡ್ಡ ಪ್ರಮಾಣದಲ್ಲಿ ಆರಂಭಿಸÀುವುದು ಒಳಿತು ಎಂದು ತಿಳಿಸಿದರು.
ಈ ಮೇಳದಲ್ಲಿ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯಿಂದ 14 ವಾರದ ಬೇಕರಿ ತಂತ್ರಜ್ಞಾನ ಕುರಿತು ಸರ್ಟಿಫಿಕೇಟ್ ಪಡೆದ 32 ವಿದ್ಯಾರ್ಥಿಗಳಿಂದ ಸುಮಾರು 80ಕ್ಕೂ ಹೆಚ್ಚು ವಿವಿಧ ನವೀನ ಉತ್ಪನ್ನಗಳನ್ನು ಮತ್ತು 30ಕ್ಕೂ ಹೆಚ್ಚು ಅಲಂಕರಿಸಿದ ಕೇಕ್‍ಗಳು ಮಾರಾಟ ಮಾಡಲಾಗಿದೆ. ಆರೋಗ್ಯದ ಮಹತ್ವವನ್ನು ಮನಗಂಡು ಮೈದಾ ರಹಿತ ವಿವಿಧ ನವೀನ ಉತ್ಪನ್ನಗಳಾದ ಚಾಕೊಲೇಟ್ ಬೆಣ್ಣೆ ಬಿಸ್ಕತ್ತು, ತೆಂಗಿನಕಾಯಿ ಸ್ಟಫ್ ಬಿಸ್ಕತ್ತು, ಚೋಕೋ ಚಿಪ್ ಬಿಸ್ಕತ್ತು, ಖರ್ಜೂರ ಕೇಕ್, ದಿಲ್ ಕುಶ್, ರವಾಕೇಕ್, ಖರ್ಜೂರ ಮತ್ತು ಕಡಲೆಕಾಯಿ ಕುಕೀಸ್, ಮ್ಯಾಟರ್ ಸ್ಟಫ್ ಮಿನಿ ಸ್ನ್ಯಾಕ್, ರಸ್ಮಲೈ ಕಪ್‍ಕೇಕ್, ಮಿಶ್ರ ವೆಜ್ ಸ್ಟಫ್‍ರೋಲ್, ಡ್ರೈ ಫ್ರೂಟ್ ಸ್ಟಫ್‍ರೋಲ್, ಮಾರ್ಬಲ್ ಬಿಸ್ಕತ್ತುಗಳು, ರೆಡ್ ವೆಲ್ವೆಟ್ ಸ್ವಿಸ್ ರೋಲ್, ತಾಜಾ ತೆಂಗಿನಕಾಯಿ ಡಿಲ್ ಪಸಾಂಡ್, ಪನೀರ್ ಬನ್, ಸ್ಟ್ರಾಬೆರಿ ಕುಕೀಸ್, ಸೆನಿಮನ್‍ರೋಲ್, ಮ್ಯಾಕ್ರಾನ್ಸ್, ಪನೀರ್ ಪಫ್, ಕ್ರಂಚಿ ಬಿಸ್ಕತ್ತುಗಳು, ರಾಗಿ ಬೀಟ್ರೂಟ್ ಕೇಕ್, ರಾಗಿ ಜಾಗರಿ ಬಿಸ್ಕತ್ತು, ಬೀಟ್ರೂಟ್ ಕುಕೀಸ್, ಇತ್ಯಾದಿಗಳು ಗ್ರಾಹಕರ ಮನಸೆಳೆದವು.
ಮೇಳದಲ್ಲಿ ಡಾ: ಕೆ.ಸಿ.ನಾರಾಯಣಸ್ವಾಮಿ, ಕುಲಸಚಿವರು, ಡಾ: ವೈ.ಎನ್. ಶಿವಲಿಂಗಯ್ಯ, ವಿಸ್ತರಣಾ ನಿರ್ದೇಶಕರು, ಡಾ: ಹೆಚ್.ಎಸ್. ಶಿವರಾಮು, ಸಂಶೋಧÀನಾ ನಿರ್ದೇಶಕರು, ಡಾ: ಕೆ.ಪಿ. ರಘುಪ್ರಸಾದ್, ಸಹ ವಿಸ್ತರಣಾ ನಿರ್ದೇಶಕರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.