ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ, ಬೆಂಗಳೂರಿನ ಯಲಹಂಕ ತಾಲ್ಲೂಕು ಜಾಲ ಹೋಬಳಿ ಮಾರೇನಹಳ್ಳಿ ಗ್ರಾ.ಪಂ. ಚೊಕ್ಕನಹಳ್ಳಿಯ ಮಾರುತಿ ಬಡಾವಣೆಯಲ್ಲಿ ಸ್ಥಾಪಿಸಲಾಗಿರುವ
ಶ್ರೀ ಬಾಯಿಕೊಂಡ ಗಂಗಮ್ಮ ದೇವಿ
ಹಾಗೂ ಶ್ರೀ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ, ವಾಡಿಕೆಯಂತೆ ಈ ಬಾರಿಯೂ ಶ್ರಾವಣ ಮಾಸದಲ್ಲಿ 3ನೇ ವಾರ್ಷಿಕ ಮಹೋತ್ಸವದ ಆಚರಣೆಯು ವಿಜೃಂಭಣೆಯಿಂದ ನೆರವೇರಿತು. ಶ್ರೀ ಕ್ಷೇತ್ರದ ದೈವಗಳ ಸಂಕಲ್ಪದಂತೆ ಶ್ರೀ ಗಂಗಮ್ಮ ದೇವಿ ಉಪಾಸಕರು ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರು ಆದ ಶ್ರೀ ಭಾಸ್ಕರ್ ನಾಯ್ಡುರವರ ಮಾರ್ಗದರ್ಶನದಲ್ಲಿ, ಆಗಸ್ಟ್ 30 ನೇ ತಾರೀಖು ಶುಕ್ರವಾರ ಹಾಗೂ 31 ನೇ ತಾರೀಖು ಶನಿವಾರದಂದು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶುಕ್ರವಾರ ಸಂಜೆ ಗಂಗೆ ಪೂಜೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು ದೀಪಾರಾಧನೆ, ಗಣಪತಿ ಪೂಜಾ, ಮಹಾಸಂಕಲ್ಪ, ಪುಣ್ಯಾಹವಾಚನ, ನವಗ್ರಹ ಪೂಜೆ ಪ್ರಧಾನದೇವತಾ ಕಳಶಾರಾಧನೆ ಅಗ್ನಿ ಪ್ರತಿಷ್ಠೆ, ಗಣಪತಿ ಹೋಮ, ಪರಿವಾರ ಹೋಮ ಲಘು ಪೂರ್ಣಾಹುತಿ ನಂತರ ಮರುದಿನ
ಶನಿವಾರದಂದು ಮುಂಜಾನೆ ಸುಪ್ರಭಾತ ಸೇವೆಯಿಂದ ಮೊದಲುಗೊಂಡು ದಿವ್ಯವೇದ ಪಾರಾಯಣ, ಗಣಪತಿ ಪ್ರಾರ್ಥನೆ, ಕಳಶಾರಾಧನೆ ಹೋಮ, ಕೈಂಕರ್ಯ, ಗಣ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಉಮಾ ಮಹೇಶ್ವರ ಹೋಮ, ಪ್ರಧಾನ ದೇವತಾ ಶ್ರೀ ಬಾಯಿಕೂಂಡ ಗಂಗಮ್ಮದೇವಿ ಮತ್ತು ಶ್ರೀ ಅಭಯ ಆಂಜನೇಯಸ್ವಾಮಿ ಹೋಮ, ಶತೃ ಭಾದೆ ನಿವಾರಣೆಗಾಗಿ ವಿಶೇಷ ಪ್ರತ್ಯಂಗಿರ ಹೋಮ, ಪರಿವಾರ ಹೋಮ, ಶಾಂತಿ ಹೋಮ ಪ್ರಾಯಶ್ಚಿತ ಹೋಮ, ಮಹಾ ಪೂರ್ಣಾಹುತಿ, ಅಲಂಕಾರ ಸೇವೆ ಅಷ್ಟಾವಧನ ಸೇವೆಗಳಲ್ಲಿ ಸ್ಥಳೀಯ ಸುತ್ತ ಮುತ್ತಲಿನ ಹಾಗೂ ದೂರದ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳು ಭಕ್ತಿ ಶ್ರದ್ದೆಗಳಿಂದ ಪಾಲ್ಗೊಂಡು ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದಗಳನ್ನು ನಂತರ ವ್ಯವಸ್ಥೆ ಮಾಡಲಾಗಿದ್ದ ಅನ್ನ ಸಂತರ್ಪಣೆಯಲ್ಲಿ ಅನ್ನ ಪ್ರಸಾದ ಸ್ವೀಕರಿಸಿದರು.
ಮಧ್ಯಾಹ್ನದ ವೇಳೆಗೆ ಶ್ರೀ ದೇವಿ ಉಪಾಸಕರಾದ ಶ್ರೀ ಭಾಸ್ಕರ್ ನಾಯ್ದುರವರು ಕರಗಧಾರಿಯಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಗಂಗಮ್ಮನ ಕರಗವು ಸಂಚಾರ ನಡೆಸಿ, ಭಕ್ತರಿಗೆ ದರ್ಶನ ನೀಡಿ ಅವರ ಪೂಜೆ ಸ್ವೀಕರಿಸಿ ದೇವಸ್ಥಾನಕ್ಕೆ ಮರಳಿ ಬಂದ ನಂತರ, ನಮ್ಮ ದೇಶದ ಎಲ್ಲಾ ಪ್ರಾಂತ್ಯಗಳಿಂದ ಈ ವಿಶೇಷ ಶ್ರಾವಣ ಮಾಸದ ಮಹೋತ್ಸವದಲ್ಲಿ ಪಾಲ್ಗೊಳ್ಳಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವಂತಹ ಭಕ್ತಾಧಿಗಳ ಉಪಸ್ಥಿತಿಯಲ್ಲಿ, ವಾದ್ಯ ಮೇಳಗಳೊಂದಿಗೆ ಶ್ರೀ ಬಾಯಿಕೊಂಡ ಗಂಗಮ್ಮ ದೇವಿ ಹಾಗೂ ಶ್ರೀ ಅಭಯ ಆಂಜನೇಯಸ್ವಾಮಿ ದೇವರುಗಳ ಉತ್ಸವ ಮೂರ್ತಿಗಳ ಅದ್ದೂರಿ ಮೆರವಣಿಗೆ ಯಶಸ್ವಿಯಾಗಿ ನೆರವೇರಿತು. ದೇವಸ್ಥಾನದ ಟ್ರಸ್ಟ್ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ಕಾರ್ಯಕ್ರಮದ ಯಶಸ್ಸಿಗೆ ಸೋಮಣ್ಣ, ಸುರೇಶ್ ನಾಯರ್, ಪವನ್ ಕುಮಾರ್, ಶ್ರೀಮತಿ ನಾಗವೇಣಿ, ಹರೀಶ್, ಆದರ್ಶ ಮೊದಲಾದವರೊಂದಿಗೆ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ ಪೂರಕವಾಗಿತ್ತು.