ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬಂತೆ ಇದು ದೊಡ್ಡ ಹಬ್ಬ.ಶ್ರಾವಣ ಮಾಸದ ಶುದ್ಧ ಪಂಚಮಿ ಈ ಹಬ್ಬವನ್ನು ಆಚರಿಸಲಾಗುತ್ತದೆ.ಅದರ ಹಿಂದಿನ ದಿನ ನಾಗರ ಚೌತಿ.ಇದು ಅಷ್ಟು ಆಚರಣೆಯಲ್ಲಿಲ್ಲ.ಆದರೆ ಚೌತಿಯ ದಿನ ಉಪವಾಸ ಇದ್ದು ಹುತ್ತಕ್ಕೆ ತನಿ ಎರೆದು ಫಲಾಹಾರ ಸೇವಿಸುವರು.ಹುತ್ತಕ್ಕೆ ನೆನೆಸಿದ ಕಡಲೆಕಾಳು, ಎಳ್ಳಿನ ಚಿಗಳಿ, ಅಕ್ಕಿ ಹಿಟ್ಟಿನ ತಂಬಿಟ್ಟು ತಾಂಬೂಲ, ಬಾಳೆಹಣ್ಣು, ಇತ್ಯಾದಿ ನೈವೇದ್ಯ ಮಾಡುವರು.ನನಗೆ ತಿಳಿದಂತೆ ಇದು ಮನೆಯ ಹಿರಿಯರು ಮಾಡುವ ಹಬ್ಬ.ಅತ್ತೆ ಮಾವ ಇರುವವರು ಚೌತಿ ಮಾಡುವುದಿಲ್ಲ.ಹಾಗು ನಾಗರ ಚೌತಿ ಆಚರಣೆ ಎಲ್ಲ ಮನೆಗಳಲ್ಲೂ ಇರುವುದಿಲ್ಲ.
ಇನ್ನು ನಾಗರ ಪಂಚಮಿ ಹಬ್ಬದ ದಿನ ಎಲ್ಲರೂ ತಲೆಗೆ ಸ್ನಾನ ಮಾಡುವರು ಆದರೆ ಈ ದಿನ ಸೀಗೆಕಾಯಿ ಬಳಸುವುದಿಲ್ಲ.ನಂತರ ಮಡಿಯ ವಸ್ತ್ರ ಧರಿಸಿ ನಾಗನಿಗೆ ಷೋಡಶೋಪಚಾರ ಪೂಜೆ ಯನ್ನು ಮನೆಯ ಹಿರಿಯ ವ್ಯಕ್ತಿ ಮಾಡುವರು.ನಾಗನನ್ನು ಮಾಡಲು ಹುತ್ತದ ಮನ್ನು ತಂದು ಚಿಕ್ಕ ನಾಗಪ್ಪನನ್ನು ಮಾಡುವರು.ನಾಗರಹಾವಿನ ರಂಗೋಲಿ ಬಿಡಿಸುವರು.ಮಣ್ಣಿನ ನಾಗಪ್ಪನನ್ನು ಪೂಜೆ ಮಾಡಿದರೆ ಮಣ್ಣಿನ ಗಣಪನನ್ನು ಪೂಜಿಸಬೇಕು ಎಂದು ಶಾಸ್ತ್ರ ಇದೆ.ನಾಗರ ,ಹುತ್ತದ ಮಣ್ಣಿನ ಮೂರ್ತಿಯನ್ನುಹುಲಿಕಡ್ಡಿ ಕೆಳಗೆ ನಾಗನನ್ನು ಇಡುವರು. ನನಗ ತಿಳಿದಂತೆ ಹುರಿಕಲ್ಲಿನ ಕಡ್ಡಿ ಎಂದರೆ ಒಂದು ಜಾತಿಯ ಪೊದೆಯ ಸಸ್ಯದ ಕಡ್ಡಿ.
ಈ ದಿನದ ವಿಶೇಷ ಅಡುಗೆ ಎಂದರೆ ತೊಳೆದ ಅಕ್ಕಿಹಿಟ್ಟಿನಲ್ಲಿ ಮಾಡುವ ಖಾರದ ಕಡುಬು, ಸಿಹಿ ಕಡುಬು, ಬದನೆಕಾಯಿ ಪಲ್ಯ, ಬದನೇಕಾಯಿ ಬಜ್ಜಿ, ಹೊಸಾ ಅಕ್ಕಿಯ ಪಾಯಸ , ಮಿಕ್ಕಂತೆ ಹಬ್ಬದ ಅಡಿಗೆ.ನಾಗರ ಚೌತಿ ಆಚರಿಸುವವರು ನಾಗರ ಪಂಚಮಿ ಪೂಜೆ ಮುಗಿಸಿ ಭೋಜನ ಸೇವಿಸುವರು.
ಈ ದಿನದ ಮತ್ತೊಂದು ವಿಶೇಷ ಎಂದರೆ ಅಣ್ಣ ತಮ್ಮಂದಿರು ಅಕ್ಕ ತಂಗಿಯರ ಮನೆಗೆ ತನಿ ಎರೆಸಿಕೊಳ್ಳಲು ಬರುವರು.ಸಹೋದರಿಯರು ತಮ್ಮ ಸಹೋದರರಿಗೆ ಗಂಧ, ಅಕ್ಷತೆ ನೀಡಿ ತನಿ ಎರೆದು ಉಡುಗೊರೆ ನೀಡುವರು.
ವೈಚಾರಿಕವಾಗಿ ನೋಡಿದರೆ ಹೊಸ ಅಕ್ಕಿ ಬೆಳೆ ಬಂದಿರುತ್ತದೆ.ಶ್ರಾವಣ ಪೂರ್ತಿ ಮಳೆಗಾಲ ಬೇರೆ.ಹೀಗಾಗಿ ಹೊಸ ಬೆಳೆಯಲ್ಲಿ ಅಡುಗೆ, ಅದು ಕೂಡ ಹಬೆಯಲ್ಲಿ ಬೇಯಿಸಿದ್ದು ಎಂದರೆ ಸುಲಭವಾಗಿ ಜೀರ್ಣವಾಗೂವಂತದ್ದನ್ನು ಮಾಡುವರು. ಎಳ್ಳು ನಮ್ಮ ದೇಹಕ್ಕೆ ಉಷ್ಣ ಅಂದರೆ ಶಾಖ ನೀಡುತ್ತದೆ.ಮಿಕ್ಕಂತೆ ಒಗ್ಗರಣೆ, ಕರಿಯುವುದು, ಸುಡುವುದು ಇತ್ಯಾದಿ ನಿಷೇಧಗಳು ವರುಷದಲ್ಲಿ ಒಮ್ಮೆಯಾದರೂ ಇರದೆ ಆರೋಗ್ಯಕರವಾದದ್ದು ಏನಾದರೂ ಸೇವಿಸಲಿ ಎಂದಿರಬಹುದು.ಹಾಗೆಯೇ ನಾಗನ ಪೂಜೆಯು ಪ್ರಕೃತಿಯ ಆರಾಧನೆಯ ಅಂಗವಾಗಿ ಇದೆ.ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಮನೆಯಿಂದ ಹೊರಗೆ ಕಾಲಿಟ್ಟರೆ ಗಿಡ ಮರ ತುಂಬಿದ ಪ್ರದೇಶಗಳ ಜನರಿಗೆ ನಾಗರಹಾವು ಮೊದಲಾದ ಜನ್ತುಗಳ ಕಾಟ ಇದ್ದದ್ದೇ.ಹಾಗಾಗಿ ಈ ಹಬ್ಬದ ಆಚರಣೆ ಬಂದಿರಬೇಕು ಎನ್ನಿಸುತ್ತದೆ.ಅಲ್ಲದೆ ನಾಗರಹಾವಿನ ವಿಷ ಹಲವು ಚರ್ಮ ರೋಗಗಳಲ್ಲಿ ಬಳಸಲ್ಪಡುತ್ತದೆ ಎಂದು ಕೇಳಿದ್ದೇನೆ.
ಹಾಗೆಯೇ ಸಹೋದರರನ್ನು ಮನೆಗೆ ಕರೆದು ಸತ್ಕರಿಸಲು ಇದೊಂದು ಒಳ್ಳೆಯ ಅವಕಾಶ.ಹೀಗೆ ನಮ್ಮ ಪ್ರತಿ ಹಬ್ಬಗಳಲ್ಲಿ ಹೆಣ್ಣು ಮಕ್ಕಳಿಗೆ ತವರಿನ ನಂಟು ುಳಿಸಲು ಬಹಳ ಸಂಪ್ರದಾಯಗಳಿವೆ.
ಪೌರಾಣಿಕ ಹಾಗು ಜನಪದ ಕಥೆಗಳು ಭಿನ್ನವಾಗಿವೆ.ಆದರೆ ಮೂಲ ಉದ್ದೇಶ ಅಣ್ಣ ತಂಗಿಯರ ಸಹಬಾಳ್ವೆ.
ಬನ್ನಿ ಎಲ್ಲರೂ ನಾಗನನ್ನು ಪಂಚಮಿಯಂದು ಆರಾಧಿಸೋನ.ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಜನರ ಶಿವಮೊಗ್ಗ ಪ್ರಾಂತದ ಆಚರಣೆ ಹೇಳುತ್ತದೆ.
ಇದು ಇತರೆ ಪನ್ಗಡಗಳಲ್ಲಿ ಅವರ ಮನೆಯ.ಸಂಪ್ರದಾಯದಂತೆ ಆಚರಿಸಲ್ಪಡುತ್ತದೆ.
ರಾಧಿಕಾ ಜಿ.ಎನ್
ಟೀವೀ ಹೋಸ್ಟ್
7019990492