ವಿಶ್ವ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ನಟರಾಜ ನಾಟಕದ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.
ನ್ಯಾಯಾಧೀಶರ ಆದೇಶದಿಂದ ಪ್ರಾರಂಭವಾಗುವ ನಾಟಕ ರೋಚಕತೆಯ ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ.
ತಾನು ಮಾಡಿರದ ಕೊಲೆಯ ಕಾರಣಕ್ಕೆ ಜೈಲಿಗೆ ಹೋದ ರಂಗಭೂಮಿಯ ನಟ ರಾಜು ತನ್ನೂರಿಗೆ ಬರುತ್ತಾನೆ. ಇಲ್ಲಿ ಅವನು ಹುಟ್ಟಿ, ಬೆಳೆದ, ಆಡಿ ನಲಿದ ಮಣ್ಣು, ಮರ ಎಲ್ಲವೂ ಅವನೊಳಗೆ ಭಾವುಕತೆಯ ಅಲೆ ಎಬ್ಬಿಸುತ್ತದೆ.
ಇದೇ ಸಂದರ್ಭಕ್ಕೆ ಆ ಊರಿನ ಕಾಲೇಜಿನ ವಾರ್ಷಿಕೋತ್ಸವದ ಸಂಭ್ರಮದ ಕಾರ್ಯಕ್ರಮಕ್ಕೆ ಹಳೆಯ, ಹೊಸ ವಿದ್ಯಾರ್ಥಿಗಳು ಜೊತೆಗೆ ಸಾರ್ವಜನಿಕರು ಭಾಗವಹಿಸಬಹುದಾದ ನಾಟಕ ಸಿದ್ಧ ವಾಗುತ್ತಿರುತ್ತದೆ. ಈ ನಾಟಕದ ಹಾಡಿನ ಮಾತು ಹಾಡುಗಳನ್ನು ಕೇಳುವ ಕಲಾವಿದ ರಾಜು ಕ್ಷಣ ಕಾಲ ಮೈ ಮರೆಯುತ್ತಾನೆ.
ಆಗ ವಿದ್ಯಾರ್ಥಿಗಳು ಆಗಂತುಕ ರಾಜು ಕೂಡ ಕಲಾವಿದನೆಂದು ತಿಳಿದು ತಮ್ಮ ನಾಟಕಕ್ಕೆ ಸೇರಲು ಆಹ್ವಾನ ನೀಡುತ್ತಾರೆ. ಇಲ್ಲಿ ಹುಡುಗರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಹೋಗುವ ರಾಜು ಕ್ರಮೇಣ ತನ್ನ ಜೀವನದ ಹಿಂದಿನ ಪುಟಗಳ ನೆನಪಿಗೆ ಜಾರುವನು.
ಈ ಹಂತದಲ್ಲಿ ನಾಟಕ ಎಳೆ, ಎಳೆಯಾಗಿ ಬಿಚ್ಚಿ ಕೊಳ್ಳುತ್ತಾ ಹೋಗುತ್ತದೆ. ಒಂದೇ ಗುರುವಿನ (ಪ್ರೊಫೆಸರ್ ಪಾಂಡುರಂಗರಾವ್) ಅವರ ಶಿಷ್ಯರು
ರಾಜು ಹಾಗೂ ಮಾನೇಶಯ್ಯ!. ಇಬ್ಬರಲ್ಲಿ ಒಬ್ಬನಿಗೆ ಕಲಾವಿದನಾಗುವ ತುಡಿತ ಮತ್ತೊಬ್ಬನಿಗೆ ರಾಜಕೀಯ ಕ್ಷೇತ್ರದಲ್ಲಿ ಬೆಳೆವ ಹಂಬಲ ಇರುತ್ತದೆ. ಗುರು ರಚನೆ ಯ ನಾಟಕ ಪ್ರಹ್ಲಾದ ಚರಿತ್ರೆ ನಾಟಕವನ್ನು
ರಾಜು ಆಯ್ಕೆ ಮಾಡಿಕೊಂಡು ಅದರಲ್ಲಿ ನರಸಿಂಹನ ಪಾತ್ರ ಮಾಡಿದರೆ, ಮಾನೇಶಯ್ಯ ಹಿರಣ್ಯ ಕಶ್ಯಪು ಪಾತ್ರ ನಿರ್ವಹಿಸುತ್ತಿರುತ್ತಾನೆ. ಗುರುವಿಗೆ ಇಬ್ಬರ ಮೇಲೂ ವಿಶೇಷ ಕಾಳಜಿ ಅವರ ದೃಷ್ಟಿಯಲ್ಲಿ ಮಾನೇಶಯ್ಯ ಮಾದರಿ ರಾಜಕಾರಣಿ ಆಗಬೇಕು. ಭ್ರಷ್ಟ ವ್ಯವಸ್ಥೆ ತೊಲಗಿಸಿ, ಸಚ್ಛಾರಿತ್ಯ ರಾಜಕೀಯ ಮಾಡಬೇಕು ಎಂಬ ನಿರೀಕ್ಷೆ ಮಾನೇಶಯ್ಯ ಕುರಿತು ಇರುತ್ತದೆ.
ಈ ಹಿನ್ನೆಲೆಯಲ್ಲಿ ಗುರುಗಳು ಕ್ಷೇತ್ರದಲ್ಲಿ ಸಂಚರಿಸಿ ಮಾನೇಶಯ್ಯ ಊರಿನ ಶಾಸಕರಾಗಲು ಶ್ರಮ ವಹಿಸುತ್ತಾರೆ.
ಮೊದಲ ಬಾರಿಗೆ ಶಾಸಕನಾಗುವ ಮಾನೇಶಯ್ಯ ಕ್ರಮೇಣ ಬೆಳೆದಂತೆ ವ್ಯವಸ್ಥೆ ಯ ಜೊತೆ ಶಾಮೀಲಾಗುತ್ತಾನೆ. ಮಂತ್ರಿ ಆಗುವ ಆಸೆಗೆ ಬಿದ್ದು, ಖಾಸಗಿ ಸಂಸ್ಥೆಯ ಜೊತೆಗೆ ಒಳ ಒಪ್ಪಂದ ಮಾಡಿಕೊಳ್ಳುವ ಮಾನೇಶಯ್ಯ ಗುರುಸಿದ್ದಾಂತ, ನಂಬಿಕೆಗೆ ದ್ರೋಹ ಬಗೆಯುತ್ತಾನೆ.ಈ ಹಂತದಲ್ಲಿ ಗುರುವಿನ ಸಾವು ಹಠಾತ್ ಸಂಭವಿಸುತ್ತದೆ.
ಗುರುವಿನ ಸಾವಿಗೆ ಪ್ರತೀಕಾರ ತೆಗೆದುಕೊಳ್ಳುವ ಭಾವನೆ ರಾಜುವಿನ ಮನದಲ್ಲಿ ಮೂಡುತ್ತದೆ.
ಗುರುವಿನ ರಚನೆಯ ಪ್ರಹ್ಲಾದ ಚರಿತ್ರೆ ನಾಟಕ ಆಡುವಾಗ ಮಾನೇಶಯ್ಯನನ್ನು ಕೊಂದರೆ ಹೇಗೆ? ಎಂಬ ಪ್ಲಾನ್ ರಾಜುವಿನದು!.. ಮಾನೇಶಯ್ಯನ ಸಾವು ರಂಗದ ಮೇಲೆ ಆಗುತ್ತದೆ.. ಕೊಲೆ ಆರೋಪ ರಾಜು ಮೇಲೆ ಬರುತ್ತದೆ.. ನಿಜಕ್ಕೂ ರಾಜು ಮಾನೇಶಯ್ಯನನ್ನು ಸಾಯಿಸಿದನೇ?ಹಾಗಾದರೆ ಹೇಗೆ ಸತ್ತ? ಎಂಬ ಕುತೂಹಲ ದೃಶ್ಯ ದಿಂದ, ದೃಶ್ಯಕ್ಕೆ ಪ್ರೇಕ್ಷಕರನ್ನು ಕುರ್ಚಿ ಯ ತುದಿಗೆ ಬಂದು ಕೂರುವಂತೆ ಮಾಡುತ್ತದೆ.
ಈ ರೀತಿಯ ನಾಟಕೀಯ ವಿದ್ಯಮಾನಗಳು ಜರುಗುತ್ತಾ ಹೋಗುತ್ತದೆ. ಸರಿ, ಸುಮಾರು ಒಂದು ಗಂಟೆ ಮೂವತ್ತು ನಿಮಿಷಗಳ ನಾಟಕ ವರ್ತಮಾನದ ರಾಜಕಾರಣ,ಜಾಗತೀಕರಣ,..ಸೇರಿದಂತೆ
ಬೆಟ್ಟದಷ್ಟು ವಿಚಾರ ಪ್ರತಿಪಾದಿಸುತ್ತದೆ. ಇಡೀ ನಾಟಕವು ಪ್ಲಾಷ್ ಬ್ಯಾಕ್ ತಂತ್ರಗಳಿಂದ ಹೆಣೆಯಲಾಗಿದೆ.
ನಾಟಕವು ಪ್ರಾರಂಭದಿಂದ ಕೊನೆಯವರೆಗೂ ಎಲ್ಲೂ ಬೋರ್ ಅನ್ನಿಸುವುದಿಲ್ಲ. ಸ್ವತಃ ನಾಟಕಕಾರರು ಅಭಿನಯ ಪಟು ಆದ ಕಾರಣ ಯಾವ ರೀತಿಯಲ್ಲಿ ದೃಶ್ಯ ಗಳನ್ನು ಘಟನಾವಳಿಗಳನ್ನು ಬಳಸಿ ನಾಟಕ ರಚನೆ ಮಾಡಬೇಕೆನ್ನುವುದು ತಿಳಿದಿದೆ.
ಒಬ್ಬ ಕಲಾವಿದ ಜಾತಿ, ಧರ್ಮ ಮೀರಿ ನಿಂತ ಭಾವನೆ ನಾಟಕದ ಕೊನೆಗೆ ವ್ಯಕ್ತವಾಗುತ್ತದೆ. ನಟರಾಜ ಸ್ಮರಣಿಕೆ ನೀಡಬೇಕೆನ್ನುವ ಜನ ಪರಂಪರೆಯ ತಿರಸ್ಕರಿಸಿದ್ದ ರಾಜಕಾರಣಿ ಕಾಲನ ವಶವಾದರೇ, ಅದಕ್ಕೆ ಸಹ ಕರಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ಪಶ್ಚಾತ್ತಾಪ ಪಟ್ಟು ಬದಲಾಗುತ್ತಾನೆ.
ಕಲಾ ಪರಂಪರೆ ನಿರಾತಂಕವಾಗಿ ಮುಂದುವರೆಯುತ್ತದೆ.. ಇವೆಲ್ಲ ಕಾರಣಕ್ಕೆ ನಟರಾಜ ನಾಟಕ ಎಲ್ಲರಿಗೂ ಪ್ರಿಯವಾಗುವುದು.
ಇಡೀ ನಾಟಕದಲ್ಲಿ ಸಂಗೀತ (ಗಜಾನನ ಟಿ. ನಾಯಕ್) ಅತ್ಯುತ್ತಮವಾಗಿದೆ. ಬೆಳಕು (ಮಹದೇವ ಸ್ವಾಮಿ) ಮೇಕಪ್ (ನ್ಯಾಷನಲ್ ದೇವು) ರಂಗ ನಿರ್ವಹಣೆ (ಇತಿಹಾಸ ಶಂಕರ್) ನಾಟಕದಲ್ಲಿ ಅಭಿನಯಿಸಿದ ಎಲ್ಲಾ ಪಾತ್ರಧಾರಿಗಳು ಚೆನ್ನಾಗಿ ಅಭಿನಯಿಸಿದ್ದಾರೆ. ರಾಜಕಾರಣಿ (ಜಿ.ಸಂತೋಷ್), ರಾಜು (ಆರ್ ವೆಂಕಟರಾಜು) ಗುರು ಪಾಂಡುರಂಗರಾವ್ (ಪುರುಷೋತ್ತಮ ಕಾಚೋಹಳ್ಳಿ)
ಜಿಲ್ಲಾಧಿಕಾರಿ (ಶಂಕರ್ ಭಟ್) ಸಿಂಗಾರಿ (ಮೋಹನ್ ಕುಮಾರ್) ಬಂಗಾರಿ(ಬಸವ ಕುಮಾರ್ ಬಿ. ರಾಮಣ್ಣನವರ್) ನರ್ಸ್ (ಲಲಿತಾ ಶ್ರೀಧರ್) ..ಇವರೆಲ್ಲರೂ ನಟರಾಜನ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ.
ಇವತ್ತಿನ ಕಾಲಮಾನಕ್ಕೆ, ಯುವಜನಾಂಗಕ್ಕೆ ಇಂ ತಹ ನಾಟಕದ ಅವಶ್ಯಕತೆ ಇತ್ತು.
ಈ ಹಿನ್ನೆಲೆಯಲ್ಲಿ "ನಟರಾಜ" ನಾಟಕದ ನಟ, ನಿರ್ದೇಶಕ, ರಚನಾಕಾರರಾದ ಆರ್ ವೆಂಕಟರಾಜು ಅವರಿಗೆ ವಿಶೇಷ ಅಭಿನಂದನೆಗಳು.
ಸೌರಭ ನಾಗರಾಜ್