ನವದೆಹಲಿ: ಕಾಂಗ್ರೆಸ್ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡಿರುವ, ಕಲ್ಕಿ ಧಾಮದ ಪೀಠಾಧೀಶರೂ ಆಗಿರುವ ಅವರು, ಇಂಡಿಯಾ ಡೈಲಿ ಲೈವ್ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತ, “ರಾಹುಲ್ ಗಾಂಧಿ ಈಗ ರಾಷ್ಟ್ರೀಯ ಸಮಸ್ಯೆ” ಎಂಬುದಾಗಿ ಹೇಳಿದ್ದಾರೆ.
“ರಾಹುಲ್ ಗಾಂಧಿ ಅವರು ಇದುವರೆಗೆ ಕಾಂಗ್ರೆಸ್ನ ಸಮಸ್ಯೆಯಾಗಿದ್ದರು. ಈಗ ಅವರು ರಾಷ್ಟ್ರೀಯ ಸಮಸ್ಯೆಯಾಗಿ ಬದಲಾಗಿದ್ದಾರೆ” ಎಂದು ಟೀಕಿಸಿದರು. ಇನ್ನು, ಪಂಜಾಬ್ ಮಾಜಿ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಅವರು ಖಲಿಸ್ತಾನಿ ಪ್ರತ್ಯೇಕವಾದಿ ಅಮೃತ್ಪಾಲ್ ಸಿಂಗ್ ಪರವಾಗಿ ಮಾತನಾಡಿದ್ದನ್ನು ಕೂಡ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಟೀಕಿಸಿದರು. ಇನ್ನು, ದೇಶದಲ್ಲಿ ರಾಜಕೀಯ ಇರಬೇಕು, ಆದರೆ, ರಾಜಕೀಯಕ್ಕಾಗಿ ದೇಶವನ್ನು ಬಿಟ್ಟುಕೊಡಬಾರದು ಎಂದು ಕೂಡ ಹೇಳಿದರು.
ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಕೆಲ ದಿನಗಳ ಹಿಂದಷ್ಟೇ ರಾಹುಲ್ ಗಾಂಧಿ ಕುರಿತು ಮಾತನಾಡಿದ್ದರು. “ರಾಹುಲ್ ಗಾಂಧಿ ಅವರು ಕಾಂಗ್ರೆಸ್ಅನ್ನು ಮುಗಿಸಲು 15 ವರ್ಷ ತೆಗೆದುಕೊಂಡರು. ಇನ್ನು, ರಾಹುಲ್ ಗಾಂಧಿ ಅವರು ಪ್ರತಿಪಕ್ಷಗಳನ್ನು 15 ತಿಂಗಳೊಳಗೇ ಮುಗಿಸಲಿದ್ದಾರೆ” ಎಂದು ಹೇಳಿದ್ದರು.