*ಪಿಎಂ ವಿಶ್ವಕರ್ಮ ಯೋಜನೆ ಮಾಹಿತಿ ಶಿಬಿರ ಉದ್ಘಾಟನೆ*
ಕೋಟೇಶ್ವರ (ಉಡುಪಿ ಜಿಲ್ಲೆ) : ಪಿಎಂ ವಿಶ್ವ ಕರ್ಮ ಯೋಜನೆ ಸೇರಿದಂತೆ ಅನೇಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಗಳನ್ನು ಸದ್ಬಳಕೆ ಮಾಡಿಕೊಂಡು “ವಿಶ್ವಕರ್ಮ ಸಮುದಾಯದವರು ಉದ್ಯಮಿಗಳಾಗಲು ಪ್ರಯತ್ನಿಸಬೇಕು” ಎಂದು ಸಹಕಾರ ರತ್ನ, ವಿಶ್ವಕರ್ಮ ನಾಡೋಜ ಡಾ.ಬಿ.ಎಂ.ಉಮೇಶ್ ಕುಮಾರ್ ಕರೆ ಕೊಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಆಯೋಜಿಸಿದ್ದ “ಪಿ.ಎಂ.ವಿಶ್ವಕರ್ಮ ಯೋಜನೆ ಮಾಹಿತಿ ಶಿಬಿರ”ದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಕಾಣುವುದು ಹೇಗೆ?” ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಡಾ. ಉಮೇಶ್ ಕುಮಾರ್ ಅವರು ಈ ಕರೆ ಕೊಟ್ಟರು.
“ನಾವು ಉದ್ಯಮಿಗಳಾಗಿ ಇನ್ನೊಬ್ಬರಿಗೆ ಉದ್ಯೋಗ ಕೊಡುವುದು ಅತ್ಯಂತ ಸ್ವಾಭಿಮಾನದ ಕೆಲಸಗಳಲ್ಲಿ ಒಂದು. ವಿಶ್ವಕರ್ಮರ ಪಂಚಕಸುಬುಗಳನ್ನು ಸಂರಕ್ಷಿಸಬೇಕು ಪ್ರತಿಯೊಬ್ಬ ವಿಶ್ವಕರ್ಮನೂ ತಮ್ಮ ಸಾಂಪ್ರದಾಯಿಕ ಕಸುಬಿನಲ್ಲಿ ಉದ್ಯಮವನ್ನು ಸ್ಥಾಪಿಸಬೇಕು ಎಂದು ನಾನು ಈ ಮೂಲಕ ವಿನಂತಿ ಮಾಡಿಕೊಳ್ಳುತ್ತೇನೆ. ತಾವು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳಾದರೆ ಪಂಚ ಕಸುಬುಗಳ ಸಂರಕ್ಷಣೆ ಅತ್ಯಂತ ಸುಲಭ.”ಎಂದು ಉಮೇಶ್ ಕುಮಾರ್ ತಿಳಿಸಿದರು.
ಈ ಕಾರ್ಯಕ್ರಮವನ್ನು ಉಡುಪಿ ಚಿಕ್ಕಮಂಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ರವರು ಉದ್ಘಾಟಿಸಿದರು, ಸಭಾಧ್ಯಕ್ಷತೆಯನ್ನು ರಥ ಶಿಲ್ಪಿ ಶ್ರೀ ಲಕ್ಷ್ಮಿ ನಾರಾಯಣ ಆಚಾರ್ಯ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಿ ಎ ನಾಗರಾಜ್ ಆಚಾರ್, ರಾಘವೇಂದ್ರ ಆಚಾರ್, ಡಿಐಸಿ ಜಂಟಿ ನಿರ್ದೇಶಕ ನಾಗರಾಜ ವಿ. ನಾಯಕ್, ಕಾರ್ಮಿಕ ಅಧಿಕಾರಿ ಬಿ. ಆರ್ . ಕುಮಾರ್, ಎಎಸ್ಪಿ ಪಿ. ಎನ್. ಸತೀಶ್, ಪಿಡಿಓ ಗಣೇಶ್, ಸೇರಿದಂತೆ ಕಾರ್ಯಕ್ರಮದ ಆಯೋಜಕರಾದ ಶ್ರೀ ಚಂದ್ರ ಆಚಾರ್ , ಶ್ರೀ ರಾಜಗೋಪಾಲ್ ಆಚಾರ್ಯ ಹಾಗೂ ಅಪಾರ ಸಂಖ್ಯೆಯ ಕುಶಲ ಕರ್ಮಿಗಳು ಭಾಗವಹಿಸಿದ್ದರು.