ರಾಮನಗರ ಜಿಲ್ಲೆ ಹೆಸರು ಬದಲಾವಣೆ: ಸಚಿವರ ಅಸಂಬದ್ಧ ನಡೆ

VK NEWS
By -
0

ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲ ಸಂಪನ್ಮೂಲ ಸಚಿವರಾದ ಡಿ. ಕೆ. ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮಾಡಲು ಮುಂದಾಗಿರುವುದು ಅಸಂಬದ್ಧ ಮತ್ತು ಸ್ವಹಿತಾಸಕ್ತಿಗಾಗಿ ಮಾಡುತ್ತಿರುವ ಮೂರ್ಖತನದ ಕ್ರಮವಾಗಿದೆ. ಜಿಲ್ಲೆಯ ಹೆಸರನ್ನು ಬದಲಾಯಿಸುವುದರಿಂದ ಜಿಲ್ಲೆಯ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಮತ್ತು ಇದರಿಂದ ಸಾಮಾನ್ಯ ಜನರಿಗೆ ಯಾವುದೇ ಲಾಭವಾಗುವುದಿಲ್ಲ. 

ಇದು ಕೇವಲ ರಿಯಲ್ ಎಸ್ಟೇಟ್ ಉದ್ದೇಶದಿಂದ ಮಾಡುತ್ತಿರುವ ಕ್ರಮವಾಗಿದ್ದು, ಇದರಿಂದ ಜಿಲ್ಲೆಯ ರೈತರು ತಮ್ಮ ಜಮೀನಿಗೆ ಹೆಚ್ಚಿಗೆ ಬೆಲೆ ಬರುತ್ತದೆ ಎಂದುಕೊಂಡಿದ್ದಾರೆ ಅದು ಸುಳ್ಳು ಹಾಗು, ಅದರ ಹೆಸರಿನಲ್ಲಿ ಡಿ. ಕೆ. ಶಿವಕುಮಾರ್ ಅವರು ಅವರ ತಮ್ಮ ವ್ಯವಹಾರ ಮತ್ತು ಉದ್ಯಮ ಬೆಳೆಸಿಕೊಳ್ಳಲು ಮಾಡುತ್ತಿರುವ ಕ್ರಮವಾಗಿದೆ. ಸಾಮಾನ್ಯ ರೈತರು, ತಮ್ಮ ಜಮೀನನ್ನು ಮಾರಿಕೊಂಡು, ಕೂಲಿಗಳಾಗಿ ಬದುಕಲಿ ಎಂಬ ದುರುದ್ದೇಶವೂ ಇದರಲ್ಲಿ ಇದ್ದಂತಿದೆ. ಈ ಹಿಂದಿನ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದ ರೈತ ವಿರೋಧಿ ಮಸೂಧೆಗಳನ್ನು (ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ) ಹಿಂಪಡೆಯುವುದಾಗಿ ಚುನಾವಣಾ ಸಮಯದಲ್ಲಿ ರಾಜ್ಯದ ರೈತರಿಗೆ ಆಶ್ವಾಸನೆ ನೀಡಿದ್ದ ಕಾಂಗ್ರೆಸ್ ಪಕ್ಷವು, ಅಧಿಕಾರಕ್ಕೆ ಬಂದು ಒಂದು ವರ್ಷದ ಮೇಲಾದರೂ ಈ ಬಗ್ಗೆ ಮಾತೇ ಆಡುತ್ತಿಲ್ಲ. ಈ ವಿಚಾರವಾಗಿ ಈಗಾಗಲೇ ರೈತ ಸಂಘದವರು ಎರಡು ಬಾರಿ ಧರಣಿ ನಡೆಸಿದ್ದಾರೆ, ಆದರೂ ಕೂಡ ಯಾವುದೇ ಕ್ರಮ ವಹಿಸುತ್ತಿಲ್ಲ, ಆದರೆ, ಕೆಲಸಕ್ಕೆ ಬಾರದ ಹೆಸರು ಬದಲಾಣೆ ಮಾಡುವ ವರ್ಥ ಕಸರತ್ತು ಮಾಡುತ್ತಾ ಕಾಲಹರಣ ಮಾಡಲಾಗುತ್ತಿದ್ದಾರೆ, ಈ ಮಸೂದೆಗಳ ಬಗ್ಗೆ ಯಾಕೆ ಕ್ರಮ ಕೈಗೊಳ್ಳೂತ್ತಿಲ್ಲ.  

ಕೇವಲ ಹೆಸರು ಬದಲಾಯಿಸುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ರಾಮನಗರದ ಹೆಸರನ್ನು ’ಲಾಸ್ ಏಂಜಲೀಸ್’, ’ಲಂಡನ್’ ಅಥವಾ ’ಸ್ವರ್ಗ’ ಎಂದು ಬದಲಾಯಿಸಿದರೂ ಕೂಡ ಏನೂ ಬದಲಾವಣೆ ಆಗುವುದಿಲ್ಲ. ಮೊದಲು ಮೂಲಭೂತ ಬದಲಾವಣೆ ಮಾಡಿ; ದಕ್ಷ, ಪಾರದರ್ಶಕ ಆಡಳಿತದಿಂದ, ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸಿ,  ಭ್ರಷ್ಟಾಚಾರ ತೊಲಗಿಸಿದರೆ, ನಂತರ ಯಾವ ಹೆಸರಿದ್ದರೂ ಕೂಡ ರಾಮನಗರವು ತಾನಾಗಿಯೆ ಉತ್ತಮ ಅಭಿವೃದ್ಧಿ ಕಾಣುತ್ತದೆ. 

ಡಿ. ಕೆ. ಶಿವಕುಮಾರ್ ಅವರ ಕೆಲವು ಭಕ್ತರು ರಾಮನಗರ ಜಿಲ್ಲೆಯನ್ನು ಬೆಂಗಳೂರು ಜಿಲ್ಲೆ ಎಂದರೆ ಖುಷಿ ಪಡಬಹುದು, ಆದರೆ ಇಲ್ಲಿನ ಅವ್ಯವಸ್ಥೆ, ಭ್ರಷ್ಟಾಚಾರ, ಅಕ್ರಮಗಳನ್ನು ನೋಡಿ ಯಾವ ಹೂಡಿಕೆದಾರರು ಬರುವುದಿಲ್ಲ, ಇದೆಲ್ಲ ಜನರನ್ನು ಮೂರ್ಖರನ್ನಾಗಿ ಮಾಡುವ ತಂತ್ರವಾಗಿದೆ. ಈಗಿನ ಬೆಂಗಳೂರಿನ ಬ್ರಾಂಡ್ ಅನ್ನು ಉಳಿಸುವ ಯಾವ ಕೆಲಸವನ್ನು ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಇವರಿಂದ ಮಾಡಲಾಗುತ್ತಿಲ್ಲ. ಬೆಂಗಳೂರಿನ ರಸ್ತೆಯಲ್ಲಿ ಅದೇ ಹೊಂಡಗಳು, ದುರ್ನಾತ ಬೀರುವ ಕಸ, ಮನೆ ಹಾಗು ರಸ್ತೆಗೆ ನುಗ್ಗುವ ಮಳೆ ನೀರು, ಟ್ರಾಫಿಕ್ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಇವರಿಂದ ಸಾಧ್ಯವಾಗುತ್ತಿಲ್ಲ, ಇನ್ನು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಕರೆದು ಹೇಗೆ ಪರಿಹರಿಸುತ್ತಾರೆ. ಇದರಿಂದ ಇಲ್ಲಿಯೂ ಕೂಡ ಬೆಂಗಳೂರಿನ ತರಹ ಸಮಸ್ಯೆಗಳು ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ಸದ್ಯ ಈಗಿನ ಪರಿಸ್ಥಿತಿಯಲ್ಲಿ ಜನರು ಒಂದಷ್ಟು ನೆಮ್ಮದಿಯಿಂದ ಇದ್ದಾರೆ, ಹೆಸರು ಬದಲಾಯಿಸಿ, ತಾತ್ಕಾಲಿಕ ಭ್ರಮೆಯಲ್ಲಿ ಆಗುವ ರಿಯಲ್ ಎಸ್ಟೇಟ್ ವ್ಯವಹಾರದಿಂದ ಆ ನೆಮ್ಮದಿಯೂ ಹಾಳಾಗುತ್ತದೆ. ಇದು ಬೆಂಗಳೂರಿನ ಹೆಸರಿನಲ್ಲಿ, ರಾಮನಗರ ಜಿಲ್ಲೆಯ ಉಸ್ತುವಾರಿಯನ್ನೂ ಕೂಡ ತಾವೇ ವಹಿಸಿಕೊಳ್ಳುವ ಹುನ್ನಾರವಾಗಿದೆ.

ಈ ರೀತಿ ಜನರಿಗೆ ಮಂಕುಬೂದಿ ಎರಚುವುದನ್ನು ನಿಲ್ಲಿಸಬೇಕು. ಹೆಸರು ಬದಲಾವಣೆಯ ನಾಟಕವೂ ಕೂಡ ಬಿಜೆಪಿಯವರು ದೇವರ ಹೆಸರಿನಲ್ಲಿ ಭಾವನಾತ್ಮಕವಾಗಿ ಜನರನ್ನು ಮಂಕು ಮಾಡಿದಂತೆಯೇ, ಭಾವನಾತ್ಮಕವಾಗಿ ಜನರಿಗೆ ಮರಳು ಮಾಡುವ ಪ್ರಯತ್ನವಾಗಿದೆ. ತಕ್ಷಣ ಇಂತಹ ಹುಚ್ಚಾಟಗಳನ್ನು ನಿಲ್ಲಿಸಿ, ಉತ್ತಮ ಆಡಳಿತ, ಮೂಲಭೂತ ಸೌಕರ್ಯಗಳು ಮತ್ತು ಭ್ರಷ್ಟಾಚಾರ ರಹಿತ ದಕ್ಷ ಆಡಳಿತ ನೀಡಿದರೆ, ಅಂತಹ ಸ್ಥಳದ ಹೆಸರು ಯಾವುದೇ ಇರಲಿ, ಅಲ್ಲಿ ಉದ್ಯಮಗಳು ನೆಲೆಯೂರುತ್ತವೆ. ಈ ಬಗ್ಗೆ ಕ್ರಮ ಕೈಗೊಂಡರೆ, ಇಂತಹ ನಾಟಕಗಳನ್ನು ಮಾಡುವ ಅವಶ್ಯಕತೆ ಇರುವುದಿಲ್ಲ. 

ಕೆ ಆರ್ ಎಸ್ ಪಕ್ಷವು ಇಂತಹ ಅಸಂಬದ್ದ ಕ್ರಮಗಳನ್ನು ವಿರೋಧಿಸುತ್ತದೆ ಮತ್ತು ಇದು ರಾಮನಗರ ಜಿಲ್ಲೆಯ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸವಾಗಿದೆ. ಈ ಬಗ್ಗೆ, ಮಾನ್ಯ ಮುಖ್ಯಮಂತ್ರಿಗಳು, ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗೆ ತಿಳುವಳಿಕೆ ನೀಡಬೇಕೆಂದು ಮನವಿ ಮಾಡುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್‌. ಜೀವನ್, ಜಿಲ್ಲಾ ಕಾರ್ಯದರ್ಶಿ ಕಿರಣ್  ಎಚ್, ಮಹಮ್ಮದ್ ಮುಸಾದಿಕ್ ಪಾಷಾ, ಲಿಯಾಕತ್ ಅಲಿ, ರೆಹ್ಮತ್ ಪಾಷಾ ಹಾಗು ರಘುನಂದನ್ ಭಾಗವಹಿಸಿದ್ದರು.


Tags:

Post a Comment

0Comments

Post a Comment (0)