ಪ್ರೇಕ್ಷಕರ ಮನದಂಗಳದಲ್ಲಿ ಸ್ಥಾಯಿಯಾದ ‘ ಅಮೃತ ಮಂಥನ ’

VK NEWS
By -
0

*   ವಿದುಷಿ  ಶಮಾ ಕೃಷ್ಣ  ನೇತೃತ್ವದಲ್ಲಿ  ನೃತ್ಯಾರ್ಣವ

* ಶ್ರದ್ಧಾ ನೃತ್ಯ ಸಂಸ್ಥೆ 14ನೇ ವಾರ್ಷಿಕೋತ್ಸವ ಸಂಪನ್ನ

* ಪ್ರೇಕ್ಷಕ ವರ್ಗದಿಂದ ಮೆಚ್ಚುಗ


 ಕೌಸಲ್ಯಾ ರಾಮ

ಬೆಂಗಳೂರು: ನಗರದ ಶ್ರದ್ಧಾ ನೃತ್ಯ ಸಂಸ್ಥೆ 14ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ ಶ್ರದ್ಧಾ ನೃತ್ಯಾರ್ಣವ’ ವಿಶೇಷ ನೃತ್ಯೋತ್ಸವ ಕಲಾ ರಸಿಕರ ಮನಸೂರೆಗೊಂಡಿತು.


ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಉತ್ಸಾಹಿ ಕಲಾವಿದರಿಂದ ನೃತ್ಯ ಸಮರ್ಪಣೆಯಾಗಿದ್ದು ವಿಶೇಷ. ಇದುವೇ ‘ನೃತ್ಯಾರ್ಣವ’ ದ ವಿಶೇಷ.

ದೇಶದ ಸುವಿಖ್ಯಾತ ರಚನೆಕಾರರ ಕೃತಿಗಳನ್ನು  ಮೊದಲ ಹಂತದಲ್ಲಿ ನೃತ್ಯಾರ್ಣವಕ್ಕೆ ಸಮರ್ಥವಾಗಿ ಬಳಸಿಕೊಂಡು ಅದಕ್ಕೆ ತಕ್ಕಂತೆ ಚೇತೋಹಾರಿಯಾಗಿ ಯುವತಿಯರು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು. ಉತುಕ್ಕಾಡು ವೆಂಕಟಸುಬ್ಬಯ್ಯ ಅವರ ಆನಂದ ನರ್ತನ ಗಣಪತಿ,  ತುಳಸೀ ದಾಸರ ಶ್ರೀ ರಾಮಚಂದ್ರ ಕೃಪಾಳು ಭಜಮನ,  ಪದ್ಮಚರಣರ ಪ್ರದೋಷ ಸಮಯದಿ ಪರಶಿವ ತಾಂಡವ, ಪುರಂದರ ದಾಸರ ಭಾಗ್ಯದ ಲಕ್ಷ್ಮಿ ಬಾರಮ್ಮ - ಕೃತಿಗಳಿಗೆ  ಸಂಸ್ಥೆಯ ಕಿರಿಯ ಕಲಾವಿದರು ನರ್ತಿಸಿ, ಪ್ರೇಕ್ಷಕ ವರ್ಗದಿಂದ ಸೈ ಎನಿಸಿಕೊಂಡಿದ್ದು  ಗಮನಾರ್ಹ.

ಕಲಾಭಿವ್ಯಕ್ತಿಗೆ ಹೊಸ ಆಯಾಮ: ಅಮೃತಕ್ಕಾಗಿ ಸುರ- ಅಸುರರು ಮಂದರ ಪರ್ವತವನ್ನೇ ಕ್ಷೀರಸಾಗರದಲ್ಲಿ ಕಡೆದ ‘ಅಮೃತ ಮಂಥನ’ ನೃತ್ಯ ರೂಪಕ ಕಲಾಭಿವ್ಯಕ್ತಿಗೆ ಹೊಸ ಆಯಾಮವನ್ನೇ ನೀಡಿತು. ಪುರಾಣದ ಕಥೆಯಲ್ಲಿ ಅಡಗಿರುವ ಒಳಾರ್ಥಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ವರ್ಣಿಸುವ ಉದ್ದೇಶವನ್ನು ಕಲಾವಿದರು ತಮ್ಮ ಅಭಿನಯದ ಮೂಲಕ ಸಫಲ ಮಾಡಿದರು.

ಮನದಲ್ಲೇ ಮಥನ:  ಮಾನವನ  ಮನಸ್ಸೇ ಕ್ಷೀರ ಸಾಗರ, ಒಳ್ಳೆಯ ಮತ್ತು ಕೆಟ್ಟ ಚಿಂತನೆಗಳೇ ಸುರ- ಅಸುರರು. ಈ ಚಿಂತನೆಗಳ ನಿರಂತರ ಕಾದಾಟದ ನಡುವೆ ಪ್ರತಿಯೊಬ್ಬರ ಮನದೊಳಗೂ ಸಮುದ್ರ ಮಥನ ನಡೆಯುತ್ತದೆ. ಮಾನವನ ಮುಖ್ಯ ಗುರಿಯೇ ಮೋಕ್ಷ ಎಂಬ ಅಮೃತವನ್ನು ಸಿದ್ಧಿಸಿಕೊಳ್ಳುವುದು.  ಧರ್ಮದ ಹಾದಿಯನ್ನು ಪಾಲಿಸುವ ಸುರರಿಗೇ ಈ ಮೋಕ್ಷ ಎಂಬುವ ಅಮೃತ ಸಿಗುತ್ತದೆ ಎನ್ನುವ ಸಂದೇಶವನ್ನು ಮನಮುಟ್ಟುವ ರೀತಿಯಲ್ಲಿ ಈ ನೃತ್ಯ ರೂಪಕ ಪ್ರೇಕ್ಷಕರಿಗೆ ಉಣಬಡಿಸಿತು.

ಸಂಸ್ಥೆ ನಿರ್ದೇಶಕಿ ಶಮಾ ಕೃಷ್ಣ ಹಾಗು ಹಿರಿಯ ಕಲಾವಿದರಿಂದ  ಅಮೃತ ಮಂಥನ ಎಂಬುವ ರಸಪೂರ್ಣ ನೃತ್ಯ ನಾಟಕದ ಪ್ರಸ್ತುತಿ ವಿಶೇಷವಾಗಿ ಮೂಡಿಬಂತು. ಇದಕ್ಕೆ ಶತಾವಧಾನಿ ಡಾ. ಆರ್. ಗಣೇಶ್‌ರ ಸಾಹಿತ್ಯ, ಕಲಾವಿದ ಪ್ರವೀಣ್ ಡಿ. ರಾವ್ ಸಂಗೀತ ಮತ್ತು ವಿದುಷಿ ಶಮಾ ಕೃಷ್ಣ ಅವರ ನೃತ್ಯ ಸಂಯೋಜನೆ ಸಮರ್ಥವಾದ ನ್ಯಾಯ ಒದಗಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

‘ಅಮೃತ ಮಥನ’ಕ್ಕೆ  ಅಂದು ಸಾಕ್ಷಾತ್ ಶ್ರೀಹರಿಯೇ ಸೂತ್ರಧಾರನಾಗಿದ್ದ. ಇಂದು ಖ್ಯಾತ ಸಂಶೋಧಕಿ ಪ್ರೊ. ಕರುಣಾ ವಿಜಯೇಂದ್ರ, ಖ್ಯಾತ ನೃತ್ಯ ಪಟುಗಳಾದ ಶೇಷಾದ್ರಿ ಅಯ್ಯಂಗಾರ್ ಮತ್ತು ನವ್ಯಾ ನಟರಾಜ  ಅವರು ಕಲಾ ರಸದೌತಣಕ್ಕೆ

ಸಾಕ್ಷಿಯಾಗಿದ್ದು ಬಹು ವಿಶೇಷ.

ನನ್ನ ಕನಸು, ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಿರಿಯ ಮತ್ತು ಕಿರಿಯ ಶಿಷ್ಯರು ಸೂಕ್ತವಾಗಿ ಸ್ಪಂದಿಸಿದ್ದಾರೆ. ನೃತ್ಯ ರೂಪಕ ಪ್ರಸ್ತುತಿ ಸಂದರ್ಭ ಕಲಾವಿದರ ಪ್ರತಿ ಹೆಜ್ಜೆಯಲ್ಲೂ ಹೊಸತನ ಮೂಡಿದೆ. ಶ್ರದ್ಧಾ ನೃತ್ಯ ಸಂಸ್ಥೆ ಮೂಲಕ 14 ವರ್ಷ ನಾನು ನಡೆಸಿದ ನರ್ತನ ಕಲಾ ಬೋಧನೆ ಶಿಷ್ಯವರ್ಗದ ಮನಗಳನ್ನು ಮಥನ ಮಾಡಿ ಇಂದು ರಸಿಕ ಮಹೋದಯರಿಗೆ ಆತ್ಮಾನಂದವೆಂಬ ಅಮೃತಪಾನ  ಮಾಡಿಸಿದೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೊಸ ಪ್ರಯೋಗಕ್ಕೆ ಅಣಿಯಾಗಲು  ‘ನೃತ್ಯಾರ್ಣವ’ ಹೊಸ ಚೈತನ್ಯ ನೀಡಿದೆ.  

 ವಿದುಷಿ ಶಮಾ ಕೃಷ್ಣ

ಹಿರಿಯ ಭರತನಾಟ್ಯ ಕಲಾವಿದೆ

Post a Comment

0Comments

Post a Comment (0)