ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕಳೆದೊಂದು ತಿಂಗಳಿಂದ ದಿಲ್ಲಿಯಲ್ಲಿ ನೀರಿನ ಹಾಹಾಕಾರ ಮಿತಿಮೀರಿದೆ. ಸಮಸ್ಯೆ ಪರಿಹರಿಸಬೇಕಿದ್ದ ಸರಕಾರ, ಜಲ ಮಂಡಳಿ ಕೈಕಟ್ಟಿ ಕುಳಿತಿವೆ. ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕವೂ ನೀರಿನ ಸಂಕಟ ನಿವಾರಣೆಯಾಗಿಲ್ಲ. ನೆರೆಯ ರಾಜ್ಯಗಳಾದ ಹಿಮಾಚಲ ಪ್ರದೇಶ, ಹರಿಯಾಣದಿಂದ ನೆರವಿನ ನಿರೀಕ್ಷೆಯೂ ಹುಸಿಯಾಗಿದೆ. ಬಗೆಹರಿಯದ ನೀರಿನ ಬವಣೆಯಿಂದ ರೊಚ್ಚಿಗೆದ್ದಿರುವ ಸ್ಥಳೀಯರು ಜಲ ಮಂಡಳಿ ಕಚೇರಿ ಮೇಲೆ ದಾಳಿ ನಡೆಸಿ, ಕಚೇರಿಯ ಕಿಟಕಿ, ಗಾಜುಗಳನ್ನು ಧ್ವಂಸಗೊಳಿಸಿದ್ದಾರೆ.
ದಿನೇದಿನೆ ಹೆಚ್ಚುತ್ತಿರುವ ನೀರಿನ ಅಭಾವದಿಂದ ಬಸವಳಿದಿದ್ದ ಜನ, ಭಾನುವಾರ ಛತ್ತರ್‌ಪುರ ಪ್ರದೇಶದಲ್ಲಿದ್ದ ದಿಲ್ಲಿ ಜಲ ಮಂಡಳಿಗೆ ಮುತ್ತಿಗೆ ಹಾಕಿದರು. ಈ ವೇಳೆ ಕೆಲವರು ಕಚೇರಿ ಮೇಲೆ ಕಲ್ಲು ತೂರಿದ್ದು, ಮಣ್ಣಿನ ಕೊಡಗಳಿಂದ ಕಿಟಕಿಯ ಗಾಜುಗಳು ಪುಡಿಯಾಗಿವೆ. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಈ ನಡುವೆ ದ್ವಾರಕಾ ಜಿಲ್ಲೆಯಲ್ಲಿ ನೀರು ಹಿಡಿದುಕೊಳ್ಳುವ ವಿಚಾರವಾಗಿ ಗುಂಪು ಘರ್ಷಣೆ ಉಂಟಾಗಿದೆ. ಬೀದಿ ನಲ್ಲಿಗಳಲ್ಲಿ ನೀರು ತುಂಬಿಸಿಕೊಳ್ಳುವ ಸಂಬಂಧ ನಡೆದ ಗಲಾಟೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹರಿಯಾಣದ ಬಿಜೆಪಿ ಸರಕಾರ ದಿಲ್ಲಿಗೆ ನೀರು ಬಿಡದೆ ಮೋಸ ಮಾಡಿದೆ. ಆದರೆ, ಇಲ್ಲಿನ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ದಿಲ್ಲಿ ಎಎಪಿ ಸರ್ಕಾರದ ಸಚಿವೆ ಆತಿಶಿ ಆರೋಪಿಸಿದ್ದಾರೆ.
ಮುಂದಿನ 15 ದಿನಗಳ ಕಾಲ ಪ್ರಮುಖ ನೀರಿನ ಮಾರ್ಗಗಳಲ್ಲಿ ಗಸ್ತು ತಿರುಗುವುದು ಹಾಗೂ ರಕ್ಷಣೆ ನೀಡಲು ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರಿಗೆ ದಿಲ್ಲಿ ಜಲ ಸಚಿವೆ ಆತಿಶಿ ಭಾನುವಾರ ಪತ್ರ ಬರೆದಿದ್ದಾರೆ.
ದಕ್ಷಿಣ ದಿಲ್ಲಿಯ ಗರ್ಹಿ ಮೆಂದು ಟ್ರಾನ್ಸ್‌ಫಾರ್ಮರ್ ಸಮೀಪ ಮುಖ್ಯ ನೀರಿನ ಕೊಳವೆ ಮಾರ್ಗದಲ್ಲಿ ದೊಡ್ಡ ಸೋರಿಕೆಯಾಗುತ್ತಿರುವುದನ್ನು ಡಿಜೆಬಿ ಗಸ್ತು ತಂಡ ಪತ್ತೆ ಮಾಡಿದೆ. ಈ ಪೈಪ್‌ಅನ್ನು ತುಂಡರಿಸಿರುವುದು ಕಂಡುಬಂದಿದೆ. ದಿಲ್ಲಿಯಲ್ಲಿ ನೀರಿನ ಅಭಾವ ಸೃಷ್ಟಿಸಲು ಸಂಚು ನಡೆಸಿರುವಂತೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.
"ದಿಲ್ಲಿಯಲ್ಲಿ ಸಾಕಷ್ಟು ನೀರು ಸಂಗ್ರಹವಿದೆ. ಹರಿಯಾಣದ ಸರಕಾರ ಒಪ್ಪಂದಕ್ಕಿಂತ ಹೆಚ್ಚಿನ ನೀರನ್ನು ಹರಿಸಿದೆ. ಸರಿಯಾದ ಯೋಜನೆ ಇಲ್ಲದೆ ಅವೈಜ್ಞಾನಿಕವಾಗಿ ಸರಬರಾಜು ಮಾಡಿದ ಆಪ್ ಸರಕಾರದ ನೀತಿಯಿಂದ ಜಲ ಮಂಡಳಿಗೆ 7,300 ಕೋಟಿ ರೂ. ನಷ್ಟ ಉಂಟಾಗಿದೆ. 'ಟ್ಯಾಂಕರ್ ಮಾಫಿಯಾ'ಗೆ ಬೆಂಗಾವಲಾಗಿ ನಿಂತಿರುವ ಆಪ್, ದಿಲ್ಲಿ ಜನರಿಗೆ ದ್ರೋಹ ಎಸಗಿದೆ" ಎಂದು ಬಿಜೆಪಿಯ ನೂತನ ಸಂಸದೆ ಬಾನ್ಸುರಿ ಸ್ವರಾಜ್ ಕಿಡಿಕಾರಿದ್ದಾರೆ.
ಬಾನ್ಸುರಿ ಹಾಗೂ ಇತರೆ ಬಿಜೆಪಿ ನಾಯಕರು ಖಾಲಿ ಬಿಂದಿಗೆ ಪ್ರದರ್ಶಿಸಿ ರಾಜ್ಯ ಎಎಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ದಿಲ್ಲಿಯ ಶೇ 40ರಷ್ಟು ನೀರನ್ನು ನೀರಿನ ಮಾಫಿಯಾವು ಕದಿಯುತ್ತಿದೆ ಇಲ್ಲವೇ ವ್ಯರ್ಥವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.