ಹೈಕೋರ್ಟ್ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ಅವರಿಗೆ ಆತ್ಮೀಯ ಬೀಳ್ಕೊಡುಗೆ

VK NEWS
By -
0

ಬೆಂಗಳೂರು, ಮೇ 31 (ಕರ್ನಾಟಕ ವಾರ್ತೆ):  ನಿವೃತ್ತಿಯ ನಂತರವೂ ನ್ಯಾಯಮೂರ್ತಿಗಳಾದ ರಾಜೇಂದ್ರ ಬಾದಾಮಿಕರ್ ತಮ್ಮ ಸಲಹೆ ಸೂಚನೆಗಳಿಂದ ಸದಾ ನಿಮ್ಮೊಟ್ಟಿಗೆ ಇರುತ್ತಾರೆ ಎಂದು ಕರ್ನಾಟಕದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ನಿಲಯ್ ವಿಪಿನ್‍ಚಂದ್ರ ಅಂಜಾರಿಯಾ ತಿಳಿಸಿದರು.

ಅವರು ಇಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
1962ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದ ರಾಜೇಂದ್ರ ಬಾದಾಮಿಕರ್ ಅವರು ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಬಾಗಲಕೋಟೆ, ಹುಬ್ಬಳ್ಳಿಯಲ್ಲಿ ಪಡೆದರು. ಕಾನೂನು ಪದವಿಯನ್ನು ಜೆಎಸ್‍ಎಸ್ ಸಕ್ರಿ ಲಾ ಕಾಲೇಜು ಹುಬ್ಬಳ್ಳಿಯಲ್ಲಿ ಪಡೆದು 3ನೇ ರ್ಯಾಂಕ್ ಗಳಿಸಿದರು.
ನಂತರ 15-07-1987ರಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‍ನಲ್ಲಿ ನೋಂದಾಯಿಸಿ ಹಿರಿಯ ನ್ಯಾಯವಾದಿ ಶ್ರೀಕಾಂತ್ ಎಸ್ ಪಾಟೀಲ್ ಅವರ ಕಚೇರಿಯಲ್ಲಿ ವೃತ್ತಿ ಆರಂಭಿಸಿದರು. ಸಿವಿಲ್, ಕ್ರಿಮಿನಲ್ ವಿಭಾಗಗಳಲ್ಲಿ ಸೇವೆ ಸಲ್ಲಿಸಿದರು. 1993 ರಲ್ಲಿ   ನ್ಯಾಯಾಧೀಶರಾಗಿ ಚಿಕ್ಕೋಡಿಯಲ್ಲಿ ಸೇವೆ ಸಲ್ಲಿಸಿ ನಂತರ 2002 ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಹಾವೇರಿಯಲ್ಲಿ ಸೇವೆ ಸಲ್ಲಿಸಿದರು.

ಬೆಂಗಳೂರಿಗೆ ವರ್ಗಾವಣೆಗೊಂಡ ನಂತರ ಕಾನೂನು ಸೇವಾ ಪ್ರಾಧಿಕಾರಕ್ಕೆ ಉಪಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ, ಸದಸ್ಯ ಕಾರ್ಯದರ್ಶಿಯಾಗಿ 2009 ರವರೆಗೂ ಸೇವೆ ಸಲ್ಲಿಸಿದರು. ತಮ್ಮ ಕಾರ್ಯಕ್ಷಮತೆ, ಪರಿಶ್ರಮದಿಂದ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ಅವರು ಜಿಲ್ಲಾ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿ, ಬೆಂಗಳೂರು, ಬೆಳಗಾವಿ, ಮೈಸೂರು ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸಿದರು. ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ, ಆನಂತರ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಂಗ ವಿಭಾಗದ ರಿಜಿಸ್ಟ್ರಾರ್ ಹಾಗೂ ರಿಜಿಸ್ಟ್ರಾರ್ ಜನರಲ್ ಆಗಿಯೂ ತಮ್ಮ ಕರ್ತವ್ಯ ನಿರ್ವಹಿಸಿದರು.

ಅವರ ಉತ್ತಮ ಸೇವೆ ಪರಿಗಣಿಸಿ ನ್ಯಾಯಾಲಯವು 2021 ರಲ್ಲಿ ಕರ್ನಾಟಕ ಉಚ್ಛ ನ್ಯಾಯಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದ್ದು ನಂತರ 2022 ರಲ್ಲಿ ಖಾಯಂ ನ್ಯಾಯಾಧೀಶರಾದರು. ಅವರು ತಮ್ಮ ಸೇವಾವಧಿಯಲ್ಲಿ ನೀಡಿದ ತೀರ್ಪುಗಳು ಇಂದಿಗೂ ಗಮನಾರ್ಹ ಎಂದರು.

 ನಂತರ ಮಾತನಾಡಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರು, ಸತ್ಯಮೇವ ಜಯತೆ ಹಾದಿಯಲ್ಲಿ ಸಾವಿರಾರು ಪ್ರಕರಣಗಳನ್ನು ನಡೆಸಿ, ಯಶಶ್ವಿಯಾಗಿದ್ದೇನೆ. ಯುವ ವಕೀಲರು ಹೆಚ್ಚು ಪ್ರಾಮಾಣಿಕ, ತ್ವರಿತ ಹಾಗೂ ನಿಷ್ಠೆಯಿಂದ ನಿರ್ವಹಿಸಬೇಕೆಂದರು. ತಮ್ಮ ವೃತ್ತಿ ಜೀವನದಲ್ಲಿ ಸಹಕರಿಸಿದ ಹಿರಿಯರಿಂದ ಕಿರಿಯವರೆಗೆ ವಂದನೆ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಕೀಲರ ಪರಿಷತ್ತಿನ ಅಧ್ಯಕ್ಷರಾದ ವಿಶಾಲ್ ರಘು ಸೇರಿದಂತೆ, ಹಿರಿಯ ನ್ಯಾಯಧೀಶರು, ವಕೀಲರು ಹಾಗೂ ರಾಜೇಂದ್ರ ಬಾದಾಮಿಕರ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)