17ನೇ ಐಪಿಎಲ್ ನ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿ ಗೆಲುವು ಕಂಡಿದೆ. ಎಂಎ ಚಿದಾಂಬರಂ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 10 ವರ್ಷಗಳ ಬಳಿಕ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಹೈದರಾಬಾದ್ ನೀಡಿದ್ದ 114 ರನ್ ಗಳ ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಐಯ್ಯರ್ ಪಡೆ, ಕೇವಲ 10.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಪಂದ್ಯ ಹಾಗೂ ಪ್ರಶಸ್ತಿ ಗೆದ್ದುಕೊಂಡಿತು. ತಂಡದ ಪರ ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು. IPL 2024 ರ ಫೈನಲ್ ಪಂದ್ಯದ ವಿಜೇತ ತಂಡಕ್ಕೆ 20 ಕೋಟಿ ರೂ. ಮತ್ತು ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂ. ಬಹುಮಾನ ಲಭಿಸಿದೆ.
ಸನ್ ರೈಸರ್ಸ್ ಹೈದರಾಬಾದ್ ನ ಸ್ಟಾರ್ ಆಲ್ ರೌಂಡರ್ ನಿತೀಶ್ ರೆಡ್ಡಿ ಉದಯೋನ್ಮುಖ ಆಟಗಾರನಾಗಿ ಆಯ್ಕೆಯಾಗಿದ್ದರು. ಅವರಿಗೆ 10 ಲಕ್ಷ ರೂ. ಹಾಗೂ ಟ್ರೋಫಿಯನ್ನು ನೀಡಲಾಯಿತು. ಈ ಆವೃತ್ತಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಗಳನ್ನು ಬಾರಿಸಿದ್ದಕ್ಕಾಗಿ ಅಭಿಷೇಕ್ ಶರ್ಮಾ ಅವರು ಸೂಪರ್ ಸಿಕ್ಸರ್ ಆಗಿ ಆಯ್ಕೆಯಾದರು. ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಡೆಲ್ಲಿ ಕ್ಯಾಪಿಟಲ್ಸ್ನ ಜೇಕ್ ಫ್ರೇಸರ್ ಮೆಕ್ಗರ್ಕ್ ಗೆದ್ದರು. ಆರೆಂಜ್ ಕ್ಯಾಪ್ ಮತ್ತೊಮ್ಮೆ ವಿರಾಟ್ ಕೊಹ್ಲಿಗೆ ದಕ್ಕಿತು ಮತ್ತು ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಅನ್ನು ನೀಡಲಾಗಿದೆ.
2012 ಮತ್ತು 2014ರಲ್ಲಿ ಗೌತಮ್ ಗಂಭೀರ್ ತಮ್ಮ ನಾಯಕತ್ವದಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದರು. ಇದೀಗ 10 ವರ್ಷಗಳ ಬಳಿಕ ಕೋಚ್ ಆಗಿ ತಂಡವನ್ನು ಮುನ್ನಡೆಸಿದ ಗಂಭೀರ್ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದಾರೆ. ಐಪಿಎಲ್ ನಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿನಂದನೆ ಸಲ್ಲಿಸಿದರು.