ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸೇವಾ ಸಂಘ (ರಿ) ವತಿಯಿಂದ ಚಿಕ್ಕಪೇಟೆಯ ಒ.ಟಿ.ಸಿ.ರಸ್ತೆಯಲ್ಲಿನ ಶ್ರೀ ನಿಮಿಷಾಂಭ ದೇವಿ ದೇವಸ್ಥಾನದಲ್ಲಿ ಶನಿವಾರ ವೈಶಾಕ ಶುಕ್ಲ ದಶಮಿಯಂದು ಸೋಮವಂಶ ಆರ್ಯ ಕ್ಷತ್ರಿಯರ ಕುಲಮಾತೆ ಶ್ರೀ ನಿಮಿಷಾಂಭ ದೇವಿಯ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿ, ಅಮ್ಮನವರ ವಿಗ್ರಹಕ್ಕೆ ಅಭಿಷೇಕಗಳನ್ನು ನೆರವೇರಿಸಿ, ದೇವಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ, ದೇವಸ್ಥಾನದಲ್ಲಿನ ಶ್ರೀ ನಿಮಿಷಾಂಭ ದೇವಿಯ ಮೂಲ ವಿಗ್ರಹವನ್ನು ವಿಶೇಷ ಅಲಂಕಾರದಿಂದ ಅಲಂಕರಿಸಿ, ಶನಿವಾರ ಮಧ್ಯಾಹ್ನದ ವೇಳೆಗೆ ಉತ್ಸವ ಮೂರ್ತಿಯನ್ನು ರಂಗಸ್ವಾಮಿ ಗುಡಿ ಬೀದಿಯಲ್ಲಿರುವ ಕಲ್ಯಾಣ ಮಂಟಪಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಅಲ್ಲಿ ಸೋಮವಾರದವರೆಗೆ ಅಮ್ಮನವರನ್ನು ಸ್ಥಾಪಿಸಲಾಗುವುದು. ಎಸ್‌ಎಕೆ ಮಹಿಳಾ ಸಂಘದ ಸದಸ್ಯರಿಂದ ಶನಿವಾರ ಸಂಜೆ ಶ್ರೀ ಲಲಿತಾ ಸಹಸ್ರನಾಮ ಪಠಣ, ಭಾನುವಾರ ಶ್ರೀ ಗಣಪತಿ ಹೋಮ, ಶ್ರೀ ನವಗ್ರಹ ಹೋಮ, ಶ್ರೀ ಸುದರ್ಶನ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಸೋಮವಾರದಂದು ಅಲಂಕೃತ ರಥದಲ್ಲಿ ಮೆರವಣಿಗೆ ಮೂಲಕ ಶ್ರೀ ನಿಮಿಷಾಂಭ ದೇವಿ ಅಮ್ಮನವರನ್ನು ದೇವಸ್ಥಾನಕ್ಕೆ ಮರಳಿ ಕರೆತರಲಾಗುತ್ತದೆ.
ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸಮುದಾಯದ ಜನರು ಮತ್ತು ಬೆಂಗಳೂರು ಸುತ್ತಮುತ್ತಲಿನ ಭಾಗದ, ನೆರೆಯ ಜಿಲ್ಲೆಗಳು ಮತ್ತು ಇತರೆ ರಾಜ್ಯಗಳಿಂದಲೂ ಸಹ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೂವು, ಹಣ್ಣು ಕಾಯಿಗಳನ್ನು ಅರ್ಪಿಸುವ ಮೂಲಕ ಭಕ್ತಿ ಶ್ರದ್ದೆಯಿಂದ ಶ್ರೀ ನಿಮಿಷಾಂಭ ದೇವಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು.
ಸಂಘದ ಅಧ್ಯಕ್ಷರು ಎಸ್.ಕಾಂತರಾಜು, ಗೌ.ಕಾರ್ಯದರ್ಶಿ ಆರ್. ಶ್ರೀನಿವಾಸರಾಜು ಮತ್ತಿತರ ಸದಸ್ಯರು ದೇವಿಯ ದರ್ಶನಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದು, ರಂಗಸ್ವಾಮಿ ದೇವಸ್ಥಾನದ ಬೀದಿಯಲ್ಲಿರುವ ಶ್ರೀ ನಿಮಿಷಾಂಭ ಕಲ್ಯಾಣ ಮಂಟಪದಲ್ಲಿ ಎಲ್ಲ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಯೋಜಕರ ಮಾಹಿತಿಯಂತೆ, ಈ ವಿಶೇಷ ಸಂದರ್ಭದಲ್ಲಿ ಸಾವಿರಾರು ಜನರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಮತ್ತು ಪ್ರಸಾದವನ್ನು ಸ್ವೀಕರಿಸಿದರು.
VARADI ; K. Sukumar Raju