ಬೆಂಗಳೂರು, ಮೇ 31: ಕೆಪಿಸಿಸಿಯ ಮುಂದಿನ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ನೇಮಕವಾಗುವ ಸಾಧ್ಯತೆ ಇದೆ ಎಂಬ ವದಂತಿಗಳ ಬಗ್ಗೆ ಇದೀಗ ಅವರೇ ಪ್ರತಿಕ್ರಿಯಿಸಿದ್ದಾರೆ. ‘ಆ ಬಗ್ಗೆ ನನಗೆ ಮಾಹಿತಿಯಿಲ್ಲ. ಮಾಧ್ಯಮಗಳಲ್ಲಿ ವಿಶ್ಲೇಷಣೆ ಆಗಬಹುದು. ಯಾರೋ ಬೇರೆ ಕಾರಣಕ್ಕೆ ಹೇಳಬಹುದು. ಈಗ ಡಿಕೆ ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಹಾಗೆಂದು ಮುಂದಿನ ದಿನಗಳಲ್ಲಿ ಕೊಟ್ಟರೆ ಬೇಡ ಎನ್ನಲು ಆಗುತ್ತದೆಯೇ?’ ಎಂದು ಅವರು ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ನಡೆಯುತ್ತಿರುವ ವಿವಿಧ ವಿಶ್ಲೇಷಣೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ಸಾಕಷ್ಟು ಚುನಾವಣೆ ಎದುರಿಸಿದ್ದೇನೆ. ಈ ಚುನಾವಣೆ ಕೂಡಾ ನಮ್ಮ ಕಾರ್ಯಕರ್ತರು ನಡೆಸಿಕೊಟ್ಟಿದ್ದಾರೆ. ಗೆಲುವಿನ ವಿಶ್ವಾಸ ಇದೆ. ಆದರೂ ಮಾಧ್ಯಮಗಳು, ಬಿಜೆಪಿ, ಜೆಡಿಎಸ್ನವರು ಎಲ್ಲಾ ಒಂದೊಂದು ರೀತಿ ಮಾತನಾಡುತ್ತಾರೆ. ಜನರ ತೀರ್ಪು ಮತ ಪೆಟ್ಟಿಗೆಯಲ್ಲಿ ಗಟ್ಟಿ ಇದೆ. ಬಿಜೆಪಿ ನನಗೆ ಸೋಲು ಅಂತ ಹೇಳಿದ್ರೆ ಅವರಿಗೆ ಒಳ್ಳೆಯದಾಗಲಿ. ಬಿಜೆಪಿ 275 ಒಳಗೆ ನಿಲ್ಲಬಹುದು, 400 ಸ್ಥಾನ ಬರುವುದಿಲ್ಲ ಎಂದು ಹೇಳಿದರು.