ಬೆಂಗಳೂರು: ಕರ್ನಾಟಕದಲ್ಲಿ ಸುತ್ತೋಲೆ ಮೂಲಕ 27 ಮುಸ್ಲಿಂ ಸಮುದಾಯವನ್ನು ಒಬಿಸಿಗೆ ಸೇರಿಸಿದ್ದು, ತಕ್ಷಣ ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಒತ್ತಾಯಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಸುತ್ತೋಲೆ ಮೂಲಕ ಹಿಂದೂ ಒಬಿಸಿ ಸಮುದಾಯಗಳ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಇಡಬ್ಲ್ಯುಎಸ್ ಅಡಿಯಲ್ಲಿ ಅವರಿಗೆ ಮೀಸಲಾತಿ ಇದ್ದೇ ಇದೆ. ಹಿಂದೂ ಒಬಿಸಿಗಳಿಗೆ ಇರುವ 27 ಶೇ ಮೀಸಲಾತಿಗೆ ಇವರನ್ನು ಸೇರಿಸಿದರೆ ಅನ್ಯಾಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಇದೇ ತಪ್ಪು ಎಂದು ಪಶ್ಚಿಮ ಬಂಗಾಲದ ಕಲ್ಕತ್ತ ಹೈಕೋರ್ಟ್ ತೀರ್ಪು ಕೊಟ್ಟಿದೆ ಎಂದು ವಿವರಿಸಿದರು. ಮಮತಾ ಬ್ಯಾನರ್ಜಿ ಅವರ ಕ್ರಮ ಅಸಿಂಧು, ಅಕ್ಷಮ್ಯ ಅಪರಾಧ ಮತ್ತು ಸಂವಿಧಾನವಿರೋಧಿ ಎಂದು ಅಲ್ಲಿನ ಹೈಕೋರ್ಟ್ ತಿಳಿಸಿದೆ ಎಂದು ಹೇಳಿದರು. ಇಲ್ಲಿ ಸಿದ್ದರಾಮಯ್ಯನವರು ಸಂವಿಧಾನವಿರೋಧಿ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಒಬಿಸಿ ಪಟ್ಟಿಯಲ್ಲಿ 108 ಸಮುದಾಯಗಳಿದ್ದವು. ಇದರಲ್ಲಿ ಮುಸ್ಲಿಮರ 2 ಸಮುದಾಯಗಳಿದ್ದವು. ವೃತ್ತಿ ಆಧಾರದಡಿ ಇವರನ್ನು ಸೇರಿಸಿದ್ದರು. ಮಿಲ್ಲರ್ ಕಮಿಷನ್‍ನಿಂದ ಇಲ್ಲಿನವರೆಗೆ ಮುಸ್ಲಿಮರನ್ನು ಒಬಿಸಿ ಅಡಿ ತರಲಸಾಧ್ಯ ಎಂದು ಹೇಳಿದ್ದರೂ ಕೂಡ 27 ಮುಸ್ಲಿಂ ಸಮುದಾಯದವರನ್ನು ಒಬಿಸಿಗೆ ಸೇರಿಸಿದ್ದಾರೆ ಎಂದು ಆಕ್ಷೇಪಿಸಿದರು.
ಕರ್ನಾಟಕದಲ್ಲಿ 27 ಮುಸ್ಲಿಂ ಸಮುದಾಯದವರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ಅಸಾಂವಿಧಾನಿಕ ಎಂದು ಪ್ರಧಾನಿ ನರೇಂದ್ರ ಮೋದಿಜೀ ಅವರು ಹೇಳಿದ್ದಾರೆ. ಇದಕ್ಕೆ ಪೂರಕವಾದ ತೀರ್ಪನ್ನೇ ಇವತ್ತು ಕಲ್ಕತ್ತ ಹೈಕೋರ್ಟ್ ಕೊಟ್ಟಿದೆ ಎಂದು ವಿವರಿಸಿದರು.
ಧರ್ಮದ ಆಧಾರದಲ್ಲಿ ಯಾರಿಗೂ ಮೀಸಲಾತಿ ಕೊಡಬಾರದು ಎಂದು ಕಲ್ಕತ್ತ ಹೈಕೋರ್ಟ್ ತಿಳಿಸಿದೆ. ಸಿದ್ದರಾಮಯ್ಯನವರ ಸರಕಾರವು ಒಂದು ತಿಂಗಳ ಹಿಂದೆ ಒಬಿಸಿ ಮೀಸಲಾತಿ 2ಎ ಒಳಗಡೆ 27 ಮುಸ್ಲಿಂ ಸಮುದಾಯಗಳನ್ನು ಸೇರಿಸಿತ್ತು. ಇದು ತುಷ್ಟೀಕರಣದ ರಾಜಕಾರಣ ಎಂದು ಹೇಳಿದರು.