ವಾಲ್ಮೀಕಿ ನಿಗಮದ ಹಣ 10 ಖಾಸಗಿ ಕಂಪನಿ ಮತ್ತು 8 ವ್ಯಕ್ತಿಗಳ ಖಾತೆಗಳಲ್ಲಿ

VK NEWS
By -
0


ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ನಿಗಮದ ಅಧಿಕಾರಿಗಳು ನೀಡಿರುವ ದೂರನ್ನು ಆಧರಿಸಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇತರ ಅಧಿಕಾರಿಗಳ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಆದರೆ, ಈ ವಂಚನೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಡಳಿತ ಮಂಡಳಿ ಸಿಬಿಐ ಅನ್ನು ಕೋರಿದೆ. ₹3 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕೆಂಬ ಆದೇಶವಿದೆ. ಬ್ಯಾಂಕ್ ವಂಚನೆ ಪ್ರಕರಣವು ₹50 ಕೋಟಿಯನ್ನು ಮೀರಿದ್ದರೆ ಆ ಬ್ಯಾಂಕ್ನ ವಿಚಕ್ಷಣ ಅಧಿಕಾರಿಯೇ ಸಿಬಿಐ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕೆಂದು 2019ರ ನವೆಂಬರ್ 6ರಂದು ಕೇಂದ್ರ ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿತ್ತು. ಈ ಎರಡೂ ಕ್ರಮಗಳು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಹಗರಣಕ್ಕೆ ಅನ್ವಯವಾಗುತ್ತವೆ ಎಂದು ಸಿಬಿಐನಲ್ಲಿ ದೀರ್ಘ ಕಾಲ ಕಾರ್ಯನಿರ್ವಹಿಸಿದ ಅನುಭವವಿರುವ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‘₹3 ಕೋಟಿಗಿಂತ ಹೆಚ್ಚಿನ ಮೊತ್ತದ ಬ್ಯಾಂಕ್ ವಂಚನೆ ನಡೆದರೆ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆ ಆಗಬೇಕೆಂಬ ಆದೇಶ ಇದೆ. ಆ ಪ್ರಕಾರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯೂ ಸಿಬಿಐಗೆ ವರ್ಗಾವಣೆ ಆಗಬಹುದು ಈ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಈಗ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದೇ ಪ್ರಕರಣಕ್ಕೆ ಎರಡು ತನಿಖೆ ನಡೆಯುವುದಿಲ್ಲ. ಸಿಬಿಐ ತನಿಖೆ ಕೈಗೆತ್ತಿಕೊಂಡರೆ ಪ್ರಕರಣವನ್ನು ವರ್ಗಾವಣೆ ಮಾಡಲಾಗುತ್ತದೆ’ ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

 ವಾಲ್ಮೀಕಿ ಅಭಿವೃದ್ಧಿ ನಿಗಮವು ಯೂನಿಯನ್ ಬ್ಯಾಂಕ್ನ ಎಂ.ಜಿ. ರಸ್ತೆ ಶಾಖೆಯಲ್ಲಿ ಹೊಂದಿದ್ದ ಖಾತೆಯಿಂದ ಆರ್ಬಿಎಲ್ ಬ್ಯಾಂಕ್ನ (ರತ್ನಾಕರ ಬ್ಯಾಂಕ್ ಲಿಮಿಟೆಡ್) ಹೈದರಾಬಾದ್ ಬಂಜಾರಾ ಹಿಲ್ಸ್ ಶಾಖೆಯಲ್ಲಿನ ಹತ್ತು ಖಾಸಗಿ ಕಂಪನಿಗಳು ಮತ್ತು ಎಂಟು ವ್ಯಕ್ತಿಗಳ ಖಾತೆಗಳಿಗೆ ₹89.62 ಕೋಟಿ ಅಕ್ರಮವಾಗಿ ವರ್ಗಾವಣೆ ಆಗಿದೆ.
ತರಬೇತಿ ಸಂಸ್ಥೆಗಳು, ಮಾನವ ಸಂಪನ್ಮೂಲ ನಿರ್ವಹಣೆ, ಭದ್ರತಾ ಏಜೆನ್ಸಿ, ವಾಣಿಜ್ಯ ವಹಿವಾಟು ಸಂಸ್ಥೆ, ಸಾಫ್ಟ್ವೇರ್ ಕಂಪನಿಗಳ ಹೆಸರಿನಲ್ಲಿರುವ ಖಾತೆಗಳಿಗೆ ಮಾರ್ಚ್ 3ರಿಂದ ಮಾರ್ಚ್ 30ರ ಅವಧಿಯಲ್ಲಿ ₹49.52 ಕೋಟಿ ವರ್ಗಾವಣೆ ಆಗಿದೆ. ವ್ಯಕ್ತಿಗಳ ಹೆಸರಿನಲ್ಲಿರುವ ಎಂಟು ಖಾತೆಗಳಿಗೆ ಮಾರ್ಚ್ 30ರಂದು ಒಂದೇ ಚೆಕ್ ಬಳಸಿ ₹40.10 ಕೋಟಿ ವರ್ಗಾಯಿಸಿರುವುದು ಪತ್ತೆಯಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಖಾತೆಗಳನ್ನು ಹೊಂದಿರುವ ಬಹುತೇಕ ಖಾಸಗಿ ಕಂಪನಿಗಳು ಬೆಂಗಳೂರಿನವು. ಕೆಲವು ಮಾತ್ರ ಹೊರ ರಾಜ್ಯದಲ್ಲಿವೆ. ಈ ಎಲ್ಲ ಕಂಪನಿಗಳ ಹೆಸರಿನಲ್ಲಿ ಆರ್ಬಿಎಲ್ ಬ್ಯಾಂಕ್ನ ಬಂಜಾರಾ ಹಿಲ್ಸ್ ಶಾಖೆಯಲ್ಲಿ ಖಾತೆ ತೆರೆದು ಅಕ್ರಮವಾಗಿ ಹಣ ವರ್ಗಾಯಿಸಿಕೊಳ್ಳಲಾಗಿದೆ.

ಈ ಎಲ್ಲ ಮೊತ್ತವನ್ನೂ ಸದರಿ ಬ್ಯಾಂಕ್ ಖಾತೆಗಳಿಂದ ಮುಟ್ಟುಗೋಲು ಹಾಕಿಕೊಳ್ಳುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಅವರು ಆರ್ಬಿಎಲ್ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ಸುಬ್ರಮಣಿಯಕುಮಾರ್ ಮತ್ತು ಕಾರ್ಪೋರೇಟ್ ಕಚೇರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.  

ಅಕ್ರಮವಾಗಿ ವರ್ಗಾವಣೆಯಾಗಿರುವ ಮೊತ್ತದಲ್ಲಿ ₹50 ಕೋಟಿಯನ್ನು ಮಂಗಳವಾರ ಸಂಜೆಯೊಳಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ವರ್ಗಾಯಿಸುವುದಾಗಿ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಭರವಸೆ ನೀಡಿದ್ದರು. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಕೂಡ ಇದನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದರು.

ಶುಕ್ರವಾರ ಸಂಜೆಯವರೆಗೆ ಯಾವ ಮೊತ್ತವೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ಮರಳಿ ಬಂದಿಲ್ಲ ಎಂಬುದನ್ನು ಇಲಾಖೆಯ ಮೂಲಗಳು ಖಚಿತಪಡಿಸಿವೆ.



Post a Comment

0Comments

Post a Comment (0)