ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಬಿಜೆಪಿ ನಾಯಕರಾದ ಸಿಟಿ ರವಿ ಹಾಗೂ ಆರ್. ಅಶೋಕ್ ಗಿಂತ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಅವರನ್ನು ಬಿಜೆಪಿ ಹೈಕಮಾಂಡ್ ನಾಯಕರು ಹೆಚ್ಚಾಗಿ ನಂಬಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಒಕ್ಕಲಿಗ ಮತ ಸೆಳೆಯುವ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ಮಾಜಿ ಸಚಿವ ಸಿಟಿ ರವಿಗೆ ಹೆಚ್ಚಿನ ಜವಾಬ್ದಾರಿ ನೀಡುವ ನಿರೀಕ್ಷೆ ಇತ್ತು. ಆದರೆ ಈ ಬಾರಿ ಇಬ್ಬರನ್ನು ಬಿಟ್ಟು ಅಶ್ವತ್ಥ ನಾರಾಯಣ ಮೇಲೆ ವರಿಷ್ಠರು ವಿಶ್ವಾಸ ಇಟ್ಟುಕೊಂಡಂತಿದೆ.
ಇದೀಗ ಇಬ್ಬರನ್ನು ಬಿಟ್ಟು ಅಶ್ವತ್ಥ ನಾರಾಯಣ ಮೇಲೆ ವಿಶ್ವಾಸ ಇಟ್ಟು ಗ್ರಾಮಾಂತರ ಕ್ಷೇತ್ರ ಗೆಲ್ಲುವ ಟಾಸ್ಕ್ ನೀಡಲಾಗಿದೆ. ಸ್ವತಃ ಅಮಿತ್ ಶಾ ಅವರೇ ಈ ಜವಾಬ್ದಾರಿಯನ್ನು ಅಶ್ವತ್ಥ ನಾರಾಯಣ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಮಣಿಸಲು ಬಿಜೆಪಿ ನಾಯಕರು ನಾನಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಗೆ ಸವಾಲಾಗಿರುವ ಈ ಕ್ಷೇತ್ರದಲ್ಲಿ ಗ್ರಾಮಾಂತರ ಉಸ್ತುವಾರಿಯಾಗಿರುವ ಸಿ ಎನ್ ಅಶ್ವತ್ಥ ನಾರಾಯಣ ಅವರ ಹೆಗಲಿಗೆ, ಪ್ರಚಾರ, ಚುನಾವಣಾ ತಂತ್ರಗಾರಿಕೆ ಜವಾಬ್ದಾರಿ ನೀಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಗೆಲ್ಲುವ ಟಾಸ್ಕ್ ನ್ನು ಸಿಟಿ ರವಿ ಅಶೋಕ್ ಗೆ ವರಿಷ್ಠರು ನೀಡಿದ್ದರು. ಆದರೆ ಕನಕಪುರದಲ್ಲಿ ಕನಿಷ್ಠ ಮತಗಳನ್ನು ಪಡೆಯುವಲ್ಲಿ ಆರ್ ಅಶೋಕ್ ವಿಫಲರಾಗಿದ್ದರು.
ಸಿಟಿ ರವಿ ಅಶೋಕ್ ಪರ ಪ್ರಚಾರ, ತಂತ್ರಗಾರಿಕೆ ಮಾಡಿದ್ದರೂ ಗೆಲುವು ಸಾಧ್ಯ ಆಗಿರಲಿಲ್ಲ. ಮಾಜಿ ಸಚಿವ ಅಶ್ವತ್ಥ ನಾರಾಯಣ ನೇರವಾಗಿ ಡಿಕೆ ಸಹೋದರರ ವಿರುದ್ಧ ತೊಡೆತಟ್ಟಿದ್ದರು. ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಿಕೆ ಸುರೇಶ್ ಹಾಗೂ ಅಶ್ವತ್ಥ ನಾರಾಯಣ ನಡುವೆ ಜಟಾಪಟಿಯೇ ನಡೆದಿತ್ತು. ಡಿಕೆ ಬ್ರದರ್ಸ್ ವಿರುದ್ಧ ಆಕ್ರಮಣಕಾರಿಯಾಗಿ ಚುನಾವಣೆ ಎದುರಿಸಲು ಅಶ್ವತ್ಥ ನಾರಾಯಣ ಅವರೇ ಸೂಕ್ತ ಎಂದು ಈ ಕಾರಣಕ್ಕಾಗಿ ಹೈಕಮಾಂಡ್ ಅವರಿಗೆ ಜವಾಬ್ದಾರಿ ನೀಡಿದೆ ಎಂಬ ಮಾಹಿತಿ ಬಿಜೆಪಿ ಮೂಲಗಳದ್ದು.