ನವದೆಹಲಿ: ಕಂಪನಿಯ ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ತನ್ನ ನಿರ್ದೇಶನಗಳನ್ನು ಪಾಲಿಸಲು ವಿಫಲರಾಗಿದ್ದಾರೆ ಎಂದು ಪತಂಜಲಿ ಆಯುರ್ವೇದದ ಸಹ ಸಂಸ್ಥಾಪಕ ಬಾಬಾ ರಾಮ್ದೇವ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಪತಂಜಲಿ ಕಂಪನಿ ನೀಡಿರುವ ಜಾಹೀರಾತುಗಳು ದೇಶದ ಕಾನೂನನ್ನು ಉಲ್ಲಂಘಿಸುತ್ತಿವೆ. ಈ ಜಾಹೀರಾತುಗಳಿಗಾಗಿ ಕಾನೂನು ಪರಿಣಾಮಗಳು ಅಥವಾ ಕ್ರಮಗಳನ್ನು ಎದುರಿಸಲು ಸಿದ್ಧರಾಗಿರಿ ಎಂದು ಸುಪ್ರೀಂ ಕೋರ್ಟ್ ಬಾಬಾ ರಾಮ್ದೇವ್ಗೆ ಹೇಳಿದೆ. ತಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಾರದು ಎಂದು ಯೋಗ ಗುರು ರಾಮ್ದೇವ್ ಮತ್ತು ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಶೋಕಾಸ್ ನೋಟಿಸ್ಗಳನ್ನು ನೀಡಿತ್ತು.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠದ ಮುಂದೆ ಮಂಗಳವಾರ ಬಾಬಾ ರಾಮ್ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಹಾಜರಾಗಿದ್ದರು.
'ಇಬ್ಬರೂ (ಬಾಬಾ ರಾಮ್ದೇವ್ ಮತ್ತು ಆಚಾರ್ಯ ಬಾಲಕೃಷ್ಣ) ಹಾಜರಾಗಿದ್ದಾರೆಯೇ?' ಎಂದು ಪೀಠ ಕೇಳಿತು. ರಾಮ್ದೇವ್ ಪರ ವಾದ ಮಂಡಿಸಿದ ವಕೀಲರು, ಇಬ್ಬರೂ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ ಎಂದು ತಿಳಿಸಿದರು.
ಪತಂಜಲಿ ಉತ್ಪನ್ನಗಳ ಜಾಹೀರಾತುಗಳು ಮತ್ತು ಅವುಗಳ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನೀಡಲಾದ ನೋಟಿಸ್ಗೆ ಪ್ರತಿಕ್ರಿಯಿಸಲು ಕಂಪನಿಯು ವಿಫಲವಾದ ನಂತರ ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಅವರಿಗೆ ಖುದ್ದು ಹಾಜರಾಗುವಂತೆ ಮಾರ್ಚ್ 19ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.