ತುಮಕೂರು: ಡಾ. ಸಿ.ಎನ್. ಮಂಜುನಾಥ್​ ಪರ ಪ್ರಚಾರ ಮಾಡಿದ ವ್ಯಕ್ತಿ ಮೇಲೆ ಹಲ್ಲೆ

VK NEWS
By -
0


 ತುಮಕೂರು, ಏಪ್ರಿಲ್ 11: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೈ ವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿಯ ಸಂಸದ ಡಿಕೆ ಸುರೇಶ್ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯು ಪ್ರಖ್ಯಾತ ಹೃದಯ ರೋಗ ತಜ್ಞ ಡಾ. ಸಿಎನ್ ಮಂಜುನಾಥ್ ಅವರನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.


ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಡಿಕೆ ಸುರೇಶ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ತೆರಳಿದ್ದ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ, ಬಿಜೆಪಿಯ ಮೂವರು ಕಾರ್ಯಕರ್ತರು ಹಲ್ಲೆ ಮಾಡಿ, ಬಳಿಕ ಚಾಕುವಿನಿಂದ ಇರಿದ ಘಟನೆ ಕುಣಿಗಲ್ ತಾಲ್ಲೂಕಿನ ನಡೇಮಾವಿನಪುರದಲ್ಲಿ ಇತ್ತೀಚೆಗೆ ನಡೆದಿತ್ತು. ಇದೀಗ ಮಂಜುನಾಥ್ ಪರ ಪ್ರಚಾರ ನಡೆಸಿದವರ ಮೇಲೆ ಹಲ್ಲೆ ನಡೆದಿದೆ.


ಲೋಕಸಭೆ ಚುನಾವಣೆಯಲ್ಲಿ  ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್  ಪರ ಪ್ರಚಾರ ನಡೆಸಿದ್ದಕ್ಕೆ ವ್ಯಕ್ತಿ ಒಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಂಚೆಪಾಳ್ಯದಲ್ಲಿ ಘಟನೆ ನಡೆದಿದೆ. ಕೆಂಪನಹಳ್ಳಿ ಗ್ರಾಮ ಪಂಚಾಯತಿ ಜೆಡಿಎಸ್ ಬೆಂಬಲಿತ ಸದಸ್ಯ ಮಂಜುನಾಥ್ ಎಂಬವರು ಹಲ್ಲೆಗೊಳಗಾದವರು.


ಕೆಂಪನಹಳ್ಳಿ ನಿವಾಸಿ ಬೋರೇಗೌಡ ಮತ್ತು ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮಾತನಾಡಬೇಕೆಂದು ಮಂಜುನಾಥ್ ಅವರನ್ನು ಕರೆಸಿಕೊಂಡಿದ್ದ ಬೋರೇಗೌಡ ಮತ್ತು ಬೆಂಬಲಿಗರು, ಪಂಚಪಾಳ್ಯದ ಬಳಿ ಬರುತ್ತಿದ್ದಂತೆ ಚಾಕುವಿನಿಂದ ಇರಿದಿದ್ದಾರೆ. ಗಾಯಗೊಂಡಿರುವ ಮಂಜುನಾಥ್ ಅವರನ್ನು ಕುಣಿಗಲ್ ತಾಲೂಕು, ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0Comments

Post a Comment (0)