ಬೆಂಗಳೂರು, ಏ.7: ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಸುಡು ಬಿಸಿಲು ಕಾಡುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ 37.8 ಡಿ.ಸೆ ಉಷ್ಣಾಂಶ ವರದಿಯಾಗಿದೆ. 30 ವರ್ಷ ಬಳಿಕ ದಾಖಲೆ ಉಷ್ಣಾಂಶ ಕಂಡುಬರುತ್ತಿದೆ. 1996ರ ಮಾ. 29ರಂದು 37.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2ರಿಂದ 3 ಡಿ.ಸೆ. ಹೆಚ್ಚು ತಾಪಮಾನ ದಾಖಲಾಗುತ್ತಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದೆ. ಅದರಲ್ಲೂ ಭಾನುವಾರ ರಾಜ್ಯದಲ್ಲಿ ಅತಿ ಹೆಚ್ಚು ತಾಪಮಾನ ಯಾದಗಿರಿ ಜಿಲ್ಲೆಯಲ್ಲಿ 44.6 ಡಿಗ್ರಿ ದಾಖಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ 43.1 ಡಿ.ಸೆ. ಉಷ್ಣಾಂಶ ದಾಖಲಾಗಿದೆ.ಹಾಗೇ, ಬೀದರ್, ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಹಾವೇರಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬಿಸಿಲಿನಲ್ಲಿ ಓಡಾಡಬಾರದು. ಸಾಕಷ್ಟು ನೀರು ಕುಡಿಯಬೇಕು. ಹತ್ತಿ ಬಟ್ಟೆ ಧರಿಸಬೇಕು. ಬಿಸಿಲಿನಲ್ಲಿ ಓಡಾಡುವಾಗ ಛತ್ರಿ, ಕನ್ನಡಕ, ಟೋಪಿ, ಶೂ, ಚಪ್ಪಲಿ ಧರಿಸಬೇಕು. ಮದ್ಯಪಾನ ತ್ಯಜಿಸಿ ದ್ರವರೂಪದ ಪಾನೀಯ ಸೇವಿಸಬೇಕು. ಅಧಿಕ ಪೋಷಕಾಂಶ ಆಹಾರ ತಿನ್ನಬಾರದು. ವಾಹನ ನಿಲುಗಡೆ ಸ್ಥಳಗಳಲ್ಲಿ ಮಕ್ಕಳು, ಸಾಕು ಪ್ರಾಣಿಗಳನ್ನು ಬಿಡಬಾರದು ಎಂದು ಹವಮಾನ ಇಲಾಖೆ ಸಲಹೆ ನೀಡಿದೆ.