ಬೆಂಗಳೂರು: ರವಿ ಬೆಳಗೆರೆ ಅವರ 66ನೇ ಜನ್ಮೋತ್ಸವದ ಪ್ರಯುಕ್ತ 'ಎಂದೂ ಮರೆಯದ ಹಾಡುಗಳು' ರವಿ ಬೆಳಗೆರೆ ಅಚ್ಚುಮೆಚ್ಚಿನ ಹಾಡುಗಳ ಅಪೂರ್ವ ರಸ ಸಂಜೆ ಮತ್ತು ‘ಓ ಮನಸೇ’ ಕೃತಿಯ ಲೋಕಾರ್ಪಣಾ ಸಮಾರಂಭವು 2024 ಮಾರ್ಚ್ 15ರ, ಶುಕ್ರವಾರದಂದು ಬೆಂಗಳೂರಿನ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ನಡೆಯಿತು.
ರವಿ ಬೆಳಗೆರೆ ಗೆಳೆಯ ಚಂದ್ರಶೇಖರ ಆಲೂರು ಮಾತನಾಡಿ, ‘ರವಿ ಅವರೊಂದಿಗೆ ಭಿನ್ನಭಿಪ್ರಾಯದೊಂದಿಗೆ ಸಹಬಾಳ್ವೆಯ ಗುಣವಿತ್ತು. ಇದರಿಂದಾಗಿಯೇ ನಮ್ಮ ನಡುವೆ ಸ್ನೇಹ ಬೆಳೆದಿತ್ತು. ಲೇಖಕರು ಯಾವಾಗಲೂ ತಮ್ಮ ಬರಹಗಳನ್ನು ಮಾತ್ರ ನೋಡುತ್ತಾರೆ ವಿನಹಃ ಇನ್ನೊಬ್ಬರ ಬರಹಗಳಿಗೆ ಜಾಸ್ತಿ ಪ್ರೋತ್ಸಾಹಿಸುವುದಿಲ್ಲ. ಆದರೆ ರವಿಬೆಳಗೆರೆ ತನ್ನೊಂದಿಗೆ ಇನ್ನೊಬ್ಬ ಲೇಖಕ ಕೂಡ ಬೆಳೆಯಬೇಕು ಎನ್ನುವಂತಹ ಮನಸ್ಥಿತಿಯನ್ನು ಹೊಂದಿದ್ದರು. ಆದ್ದರಿಂದ ನಾನು ಕೂಡ 15 ವರ್ಷಗಳ ಕಾಲ ‘ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಮಾಡಿದ್ದೆ ಎಂದು ತಿಳಿಸಿದರು.
ಹಿರಿಯ ಲೇಖಕ ಜೋಗಿ ಮಾತನಾಡಿ, ‘ಬಹುಶಃ ರವಿ ಬೆಳಗೆರೆ ಇಲ್ಲದೆ ಇದ್ದಿದ್ದರೆ ನಾನು ಇವತ್ತು ಪತ್ರಕರ್ತನಾಗುತ್ತಿರಲಿಲ್ಲ. ಜರ್ನಲಿಸಂ ಅನ್ನು ಪ್ರವೇಶ ಮಾಡುತ್ತಿರಲಿಲ್ಲ ಎಂದೆನ್ನಿಸುತ್ತದೆ. ಇದು ನನ್ನೊಬ್ಬನ ವಿಚಾರವಲ್ಲ. ರವಿ ಬೆಳಗೆರೆ ಹಲವಾರು ಮಂದಿಯನ್ನು ಓದಲು ಹಾಗೂ ಬರೆಯಲು ಹಚ್ಚಿದವರು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಲಕ್ಷಾಂತರ ಮಂದಿ ಓದುಗರನ್ನು ಮತ್ತೆ ಸಾಹಿತ್ಯದತ್ತ ಹೊರಳಿಸಿದ ವ್ಯಕ್ತಿ ಬೆಳಗೆರೆ. ತಮ್ಮ ಭಾಷೆ ಹಾಗೂ ಶೈಲಿಯಿಂದ ಹೊಸ ಮಾಧ್ಯಮದತ್ತ ಹೊರಳುತ್ತಿದ್ದ ಯುವಕರನ್ನು ಮತ್ತೆ ಓದುವಂತಹ ಹವ್ಯಾಸದಲ್ಲಿ ಹಿಡಿದಿಟ್ಟುಕೊಂಡರು. ಅದಕ್ಕೆ ಮುಖ್ಯ ಕಾರಣ ‘ಹಾಯ್ ಬೆಂಗಳೂರು’ ಪತ್ರಿಕೆ. ಒಂದೇ ಪತ್ರಿಕೆಯನ್ನು ಹತ್ತು ಇಪ್ಪತ್ತು ಭಾರೀ ಕೂಡ ಜನಗಳು ಓದುತ್ತಿದ್ದರು,” ಎಂದು ತಿಳಿಸಿದರು.
ಭಾವನಾ ಬೆಳಗೆರೆ ಮಾತನಾಡಿ, “ಓ ಮನಸೇ ಕೃತಿಯು ಒಬ್ಬ ವ್ಯಕ್ತಿಗೆ ಎದುರಾಗುವ ಸಮಸ್ಯೆ ಹಾಗೂ ಆತ ಅದನ್ನು ಹೇಗೆ ಎದುರಿಸಬಹುದು ಎನ್ನುವಂತಹ ವಿಚಾರ, ಸಲಹೆಗಳನ್ನು ನೀಡುತ್ತದೆ. ಒಳ್ಳೆಯ ಬರಹಗಾರ ಮನಸ್ಸಿಗೆ ಮುದ ನೀಡುವ ಬರಹಗಳು ಇಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಚೇತನಾ ಬೆಳಗೆರೆ, ಕರ್ಣ ಬೆಳಗೆರೆ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ರಾಮಚಂದ್ರ ಹಡಪದ ಅವರ ತಂಡದಿಂದ 'ಎಂದೂ ಮರೆಯದ ಹಾಡುಗಳು’ ಕಾರ್ಯಕ್ರಮ ನಡೆಯಿತು.