ಡಾ.ವೈ.ಜಿ.ಮುರುಳಿಧರ ಅವರಿಗೆ ‘ಮಾಹಿತಿ ಹಕ್ಕು ತಜ್ಞ ಜೆ. ಎಂ.ರಾಜಶೇಖರ ದತ್ತಿ’ ಪ್ರಶಸ್ತಿ.

VK NEWS
By -
0

ಬೆಂಗಳೂರು:  2024ರ ಕನ್ನಡ ಸಾಹಿತ್ಯ   ‘ಮಾಹಿತಿ ಹಕ್ಕು ತಜ್ಞ ಜೆ.ಎಂ.ರಾಜಶೇಖರ’ ಪ್ರಶಸ್ತಿಗೆ ಮಾಹಿತಿ ಹಕ್ಕು ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಡಾ.ವೈ.ಜಿ.ಮುರುಳಿಧರ್ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ.

ಮಾಹಿತಿ ಹಕ್ಕು  ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಈ  ಕ್ಷೇತ್ರದ ಕುರಿತು ಸಾರ್ವಜನಿಕ  ಅರಿವು ಹೆಚ್ಚಾಗುವಂತೆ ಮಾಡುವ  ಉದ್ದೇಶದಿಂದ  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪಿ.ಮಹೇಶ್ ಅವರು ‘ಮಾಹಿತಿ ಹಕ್ಕು ತಜ್ಞ ಜೆ.ಎಂ.ರಾಜಶೇಖರ ದತ್ತಿ ಪ್ರಶಸ್ತಿ’ಯನ್ನು ಸ್ಥಾಪಿಸಿರುತ್ತಾರೆ.  ಸಾಹಿತಿ, ಹವ್ಯಾಸಿ ಪತ್ರಕರ್ತ ಜೆ.ಎಂ.ರಾಜಶೇಖರ, 1500ಕ್ಕೂ ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳನ್ನು ಹಾಕಿ ಆಡಳಿತದ ಸಮರ್ಪಕ ನಿರ್ವಹಣೆಗೆ ಕಾರಣರಾಗಿದ್ದು ಅಲ್ಲದೆ ಮಾಹಿತಿ ಹಕ್ಕಿನ ಕುರಿತು ಅನೇಕ ಕಡೆ ಉಪನ್ಯಾಸಗಳನ್ನು ನೀಡಿ ಜನಜಾಗೃತಿ ಉಂಟು ಮಾಡಿದ್ದಾರೆ. ಅವರ ಹೆಸರಿನಲ್ಲಿರುವ ಪುರಸ್ಕಾರ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಉಂಟು ಮಾಡುವುದು, ಸರ್ಕಾರದಲ್ಲಿ ಈ ಕುರಿತು ಪಾರದರ್ಶಕತೆ ತರಲು ಶ್ರಮಿಸುವುದು, ಈ ಕುರಿತು ಪುಸ್ತಕಗಳನ್ನು ಬರೆಯುವುದು  ಹೀಗೆ ಮಾಹಿತಿ ಹಕ್ಕುಗಳ  ಜಾಗೃತಿ ಕುರಿತಾಗಿ  ಸಕ್ರಿಯವಾಗಿ ತೊಡಗಿಸಿ ಕೊಂಡವರಿಗೆ  ಸಲ್ಲ ಬೇಕೆಂಬುದು ದತ್ತಿದಾನಿಗಳ  ಆಶಯವಾಗಿದೆ.

ಮೈಸೂರು ಜಿಲ್ಲೆ ಹನಸೋಗೆಯಲ್ಲಿ ಜನಿಸಿದ ರಾಜಶೇಖರ  ಅವರು ಬಿ.ಎಚ್. ಇ.ಎಲ್, ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಅಯೋಗಗಳಲ್ಲಿ ಸೇವೆ ಸಲ್ಲಿಸಿ ಮುಂದೆ ಮಾಹಿತಿ ಹಕ್ಕುಗಳ ಕುರಿತ ಜಾಗೃತಿಯಲ್ಲಿ  ತಮ್ಮನ್ನು ಸಮರ್ಪಿಸಿ ಕೊಂಡಿದ್ದಾರೆ. ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ ರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಅವರು ಕೇಂದ್ರ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಸಮೂಹ ಮಾಧ್ಯಮಗಳ ಮೂಲಕ ಮಾಹಿತಿ ಹಕ್ಕುಗಳ ಕುರಿತು ವಿಶೇಷ ಜಾಗೃತಿ ಉಂಟು ಮಾಡುವುದರ ಜೊತೆಗೆ ‘ಯಾವ ಮಾಹಿತಿ ಯಾರ ಹಕ್ಕು’  ‘ಮಾಹಿತಿ ಹಕ್ಕು ಬಳಸುವುದು ಹೇಗೆ?’ ‘ಮಾಹಿತಿ ಹಕ್ಕು’ ಮೊದಲಾದ ಕೃತಿಗಳನ್ನ ರಚಿಸಿ‍ದ್ದಾರೆ.

ದತ್ತಿ ಪ್ರಶಸ್ತಿ  ಪುರಸ್ಕೃತರಾದ   ಡಾ.ವೈ.ಜಿ. ಮುರುಳಿಧರ್    ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸಿ ಅವರ ಬರಹದ ಬದುಕಿಗೆ  ಮತ್ತು ಮಾಹಿತಿ ಹಕ್ಕುಗಳ ಕುರಿತು ಜಾಗೃತಿ ಉಂಟು  ಮಾಡುವ ಪ್ರಯತ್ನಕ್ಕೆ  ಶುಭವನ್ನು ಕೋರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.

Tags:

Post a Comment

0Comments

Post a Comment (0)