ಕಾಟನ್ ಕ್ಯಾಂಡಿ ಎಂಬ ಬಂಬಾಯಿ ಮಿಠಾಯಿಗೆ ಗುಡ್ ಬೈ ಹೇಳುವ ಮುನ್ನ

VK NEWS
By -
0

ಏ ಮಾರಾಯಾ ಹೋಗ್ ಆ ಕಡಿ ಇನ್ನೊಮ್ಮೆ ಬರಬ್ಯಾಡ ನೋಡು ಈ ಹಾದ್ಯಾಗ... ಅಲ್ಲೋ ತಮ್ಮಾ ಮಟಾ ಮಟಾ ಮದ್ದಿನದಾಗ ಹೇಳಾವ್ರಿಲ್ಲ ಕೇಳಾವ್ರಿಲ್ಲ ಅಂತ ಬಂದ್ ಬಿಡ್ತಿ ನೋಡ್ ನಮ್ ನಿದ್ದಿ ಕೆಡಸಾಕ್ ಅಂತ ಮಲ್ಲಪ್ಪ ಶೆಟ್ಟರು ಆವಾಜ್ ಹಾಕುತ್ತಿದ್ದರೇ ಆತ್ರಿ ಸಾವಕಾರ್ ಇನ್ನೊಂದಿಟ್ಟ... ಅದಾವ್ರಿ ಹೋಕ್ಕೆನಿ ಅನ್ನುತ್ತಿದ್ದ ವ್ಯಕ್ತಿ ಮತ್ತೆ ತಗಡಿನ ಪೀಪಿ ಊದತೊಡಗಿದ್ದ.

ಏ ಯವ್ವ ನಂಗ ರೊಕ್ಕಾ ಕೊಡು ಮೊನ್ನಿ ಆಯಿ ಊರಿಗಿ ಬಂದಾಗ ಕೊಟ್ಟಿದ್ಳ ಅಲ್ಲ ಎಲ್ಲಿ ಇಟ್ಟಿ ಕೊಡ ಲಗೂನ ಅಂತ ರಾಮ್ಯಾ ಕಣ್ಣು ತುಂಬಿಕೊಂಡು ಅವ್ವನ ಮುಖವನ್ನೆ ದಿಟ್ಟಿಸಿ ನೋಡತೊಡಗಿದ್ದ.


ನಿಂದ್ರ ಗಂಗೀ ಏ ಗಂಗವ್ವ ನಿಂದರಬೇ... ಐ ಇದರ ಮಾರಿ ಮನ್ನಾಗ ಅಡಗಲಿ ಚಪ್ಪಲ ಇಲ್ಲದ ಹೆಂಗ್ ಓಡಾತೈತಿ ನೋಡು ಗಾರೇಗಾರ ತರಲಾಕ...ಅಂತ ನೀಲವ್ವ ತನ್ನ ಮಗಳ ಹಿಂದೆ ತಡಬಡಾಯಿಸಿ ಓಡತೊಡಗಿದ್ದಳು..

ನಂಗ್ ಬೇಕಲ್ಲಿ ಹಂ...ಅಂ...ಅಂ..ಅಂ.... ಅಂತ ಸಿದ್ಯಾ ಮನೆಯ ಅಂಗಳದಲ್ಲಿ ಹುಣಸೆ ಗಿಡದ ಕೆಳಗೆ ಬಿದ್ದು ಉರುಳಾಡತೊಡಗಿದ್ದರೆ ಪಾರವ್ವ ಅಕ್ಕಿ ಡಬ್ಬಿಯೊಳಗಿನ ಎರಡು ರೂಪಾಯಿ ನೋಟು ಮುರಿಸಿದರೆ ಚಿಲ್ಲರೆ ಎಲ್ಲಿ ಇಡುವದು ಅಂತ ಹೈರಾಣಾಗಿದ್ದಳು.

ಮಬ್ಬು ಹಳದಿ ಬಣ್ಣದ ನೆಹರು ಶರ್ಟು ಮತ್ತು ದೊಗಳೆ ಇಜಾರು ಧರಿಸಿದ್ದ ಬೊಚ್ಚು ಬಾಯಿಯ ಅಜ್ಜನೊಬ್ಬ ಚಾರಾಣೆ,ಎಂಟಾಣೆಗಳಿಗೆಲ್ಲ ತನ್ನ ಸುತ್ತ ನೆರೆದಿದ್ದ ಮಕ್ಕಳ ಕೈಗೆ,ರಾಖಿ,ಗಡಿಯಾರ,ಗೊಂಬೆ,ಮೀಸೆ ಅಂತ ಚೂಯಿಂಗ್ ಗಮ್ಮಿನಂತಹ ಸಿಹಿ ತಿನಿಸೊಂದನ್ನ ಬಿದಿರು ಕಟ್ಟಿಗೆಯಿಂದ ರಬ್ಬರಿನಂತೆ ಎಳೆದು ತರಹೇವಾರಿ ಆಕಾರಗಳನ್ನು ಸೃಷ್ಟಿಸತೊಡಗಿದ್ದ.

ಹೀಗೆ ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ಗಲ್ಲಿಗಳಲ್ಲಿ ಬರುತ್ತಿದ್ದ ಗಾರೇಗಾರ ಹೆಸರಿನ ಬಿದಿರು ಕಟ್ಟಿಗೆಗೆ ಸಿಕ್ಕಿಸಿದ ಬಣ್ಣ ಬಣ್ಣದ ಬರ್ಪಿನ ತುಂಡುಗಳು, ಮತ್ತು ಅದೇ ಐಸನ್ನು ಸಣ್ಣಗೆ ಹೆಚ್ಚಿ ಗೋಲಾಕಾರದ ಉಂಡೆ ಮಾಡಿ ಕೆಂಪು,ಹಳದಿ,ಮತ್ತು ಹಸಿರು ಬಣ್ಣದ ದ್ರಾವಣಗಳನ್ನು ಹಾಕಿ ಕೊಡುತ್ತಿದ್ದ ಐಸ್ ಕ್ಯಾಂಡಿಗಳಿಂದ ಹಿಡಿದು, ಅವ್ವ ಅಥವಾ ಅಕ್ಕನ ಉದುರಿದ ಕೂದಲು ಕೊಟ್ಟು ಹೇಅರ್ ಪಿನ್ನು,ಚಾಣಿಗೆ,ಸಣ್ಣ ಅಲ್ಯೂಮಿನಿಯಮ್ ಪಾತ್ರೆ ಮತ್ತು ಬಲೂನು ಕೊಳ್ಳುತ್ತಿದ್ದ ದಿನಗಳಲ್ಲಿ ಯಾವ ಆರೋಗ್ಯದ ವೈಪರಿತ್ಯವೂ ಬೀರದ ನಮ್ಮ ಬಾಲ್ಯದ ಗಟ್ಟಿತನ ಈಗಿನ ಮಕ್ಕಳಲ್ಲಿ ಇಲ್ಲದೆ ಇರುವದನ್ನ ನೋಡಿದರೆ ಯಾಕೋ ಮನಸ್ಸಿಗೆ ಸೂತಕದ ಛಾಯೆ ಆವರಿಸುತ್ತದೆ.

ಇಷ್ಟಕ್ಕೂ ಯಾಪಲ್ ಆರೇಂಜ್ ಬನಾನಾ ಪೈನಾಪಲ್ ಅಂತ ಈಗಿನ ನಮ್ಮ ಮಕ್ಕಳು ಗಿಳಿಪಾಠ ಒಪ್ಪಿಸುತ್ತಿದ್ದರೆ ಚಿಟ್ಟೆಯಲ್ಲಿ ಅಳೆದುಕೊಡುತ್ತಿದ್ದ ಚಿಟ್ಟಿ ಬಾರಿಕಾಯಿ,ಇಲಾಚಿಕಾಯಿ,ಮತ್ತು ಸಣ್ಣದೊಂದು ರೇಡಿಯಂ ಕಟರ್ ನಿಂದ ನಾಲ್ಕುಭಾಗವಾಗಿ ಹೆಚ್ಚಿ ಉಪ್ಪು ಖಾರ ಹಾಕಿ ಕೊಡುತ್ತಿದ್ದ ಪೇರಲಕಾಯಿ (ಸೀಬೆಕಾಯಿ) ಮತ್ತು ಸುಟ್ಟ ಅಥವಾ ಕುದಿಸಿ ಮೆಕ್ಕೆಜೋಳಕ್ಕೆ ಲಿಂಬೆ ಹಣ್ಣು ಉಪ್ಪು ಹಚ್ಚಿ ತಿನ್ನುವದೇ ಅಪರೂಪವಾಗಿದ್ದ ದಿನಗಳವು.

ಹಳೆಯ ಅಟ್ಲಾಸ್ ಮತ್ತು ಹೀರೋ

ಸೈಕಲ್ ಗಳಿಗೆ ಆಟೋ ರಿಕ್ಷಾಗಳಲ್ಲಿ ಬಳಸುತ್ತಿದ್ದ ಹಸಿರು ಬಣ್ಣದ ರಬ್ಬರ ಇರುವ ಹಿತ್ತಾಳೆಯ ಹಾರ್ನ್ ಒಂದನ್ನ ಕಟ್ಟಿಕೊಂಡೋ, ಅಥವಾ ಬಾಯಲ್ಲಿ ಊದುವ ಚಿಲುಮೆಯಂತ ಪೀಪಿಯನ್ನ ಒಂದು ಕೈಯ್ಯಲ್ಲಿ ಹಿಡಿದು ಸೈಕಲ್ ನಡೆಸುತ್ತ ವಿಚಿತ್ರವಾಗಿ ಸದ್ದು ಹೊರಡಿಸುತ್ತಲೋ, ಈಗಿನ ಚಾಕೋಬಾರ್,ಮ್ಯಾಂಗೋ,ವೆನಿಲ್ಲಾ,ಪಿಸ್ತಾದಂತಹ ಯಾವ ಪ್ಲೆವರ್ರುಗಳಿಗೂ ಕಮ್ಮಿಯಿಲ್ಲದಂತಹ ಕ್ರೀಮ್ ಐಸ್ಕ್ರೀಮ್ ಅನ್ನು ಪಾಪಡಿಯ ಕೋನಗಳಲ್ಲಿ ಚಮ್ಮಚದಿಂದ ತುಂಬಿಕೊಡುವ ಮೂರು ಟೈರಿನ ತಳ್ಳುವ ಗಾಡಿಯಲ್ಲಿ ಬರುತ್ತಿದ್ದ ಐಸ್ ಕ್ರೀಮ್ ಗಾಡಿಗೆ ಹಚ್ಚಿರುತ್ತಿದ್ದ ರಾಜ್ ಕುಮಾರ್,ಅಂಬರೀಶ್ ವಿಷ್ಟುವರ್ಧನ್ ಶಶಿಕುಮಾರ್ ಮತ್ತು ಶಿವರಾಜಕುಮಾರ್ ಹಾಗೂ ಮಾಲಾಶ್ರೀ ತಾರಾ ಮತ್ತು ಶೃತಿ ಯಂತ ಕನ್ನಡ ಸಿನೆಮಾ ನಟ ನಟಿಯರ ಫೋಟೋಗಳನ್ನು ನೋಡುತ್ತ ಚಾರಾಣೆ,ಎಂಟಾಣೆಯ ಐಸ್ಕ್ರೀಮು ಮೆಲ್ಲುತ್ತಿದ್ದ ನಾವುಗಳು ಅತಿಹೆಚ್ಚು ಇಷ್ಟದಿಂದ ತಿನ್ನುತ್ತಿದ್ದದ್ದು ಅದರ ಮೇಲೆ ಹಾಕಿಕೊಡುತ್ತಿದ್ದ ಕೆಂಪು ಅಥವಾ ಹಸಿರು ಬಣ್ಣದ ಹಸಿ ಪಪ್ಪಾಯಿ ತುಂಡುಗಳನ್ನ ಅನ್ನುವದನ್ನ ಈಗಿನ ಮಕ್ಕಳು ಬಹುಶಃ ಕಲ್ಪಿಸಿಕೊಳ್ಳುವದು ಕೂಡ ಅಸಾಧ್ಯವೇ ಸರಿ.

ಇನ್ನೂ ತಗಡಿನ  ಅಚ್ಚುಗಳಲ್ಲಿ ಬರುತ್ತಿದ್ದ ಬಿದಿರು ಕಡ್ಡಿ ಚುಚ್ಚಿ ಇಟ್ಟ ಕುಲ್ಫಿಯನ್ನು ಸ್ಟೀಲಿನ ಡಬ್ಬದಲ್ಲಿ ಇಟ್ಟ ಅದರದೆ ಪಾಕದಲ್ಲಿ ಅದ್ದಿಕೊಟ್ಟಾಗ ನಮಗೆಲ್ಲ ಇನ್ನೇನೂ ಸ್ವರ್ಗಕ್ಕೆ ಮೂರೇಗೇಣು ಅಂತ ಸಂಭ್ರಮಿಸಿದ್ದ ಬಾಲ್ಯ ನಮ್ಮದು.

ಆದರೆ ನಮಗೆ ವಯಸ್ಸಾದಂತೆಲ್ಲ ಈಗ ಕಾಲವೂ ಬದಲಾಗಿದೆ..ತಿಂಗಳುಗಟ್ಟಲೇ ಇಟ್ಟರೂ ಆಹಾರ ಖಾದ್ಯಗಳು ಕೆಡದಂತೆ ರಕ್ಷಿಸಲು ಮತ್ತು ಸುಗಂಧದ ಪರಿಮಳ ಬೀರಲು ಎಸೆನ್ಸ್ ಹಾಗೂ ಸುಂದರವಾಗಿ ಕಾಣಲು ಬಣ್ಣದ ಇಂಗ್ರಿಡೆಂಟ್ಸ್ ಗಳನ್ನು ಬಳಸದ ವಸ್ತುಗಳು ಸಿಗುವದೇ ಅಪರೂಪವಾದ ದಿನಗಳಿವು.

ಅದೆಷ್ಟೋ ಅಲ್ಪ ಪ್ರಮಾಣದ ವಿಷಮಿಶ್ರಿತ ವಿದೇಶೀ ಕಂಪನಿಗಳ ಆಹಾರ ಖಾದ್ಯಗಳ ಮೇಲೆ ಇಲ್ಲದ ಮತ್ತು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಉತ್ಪಾದನೆಯ ಮೇಲೆ ಮತ್ತು ಕರಗದ,ಕೊಳೆಯದ ಮರುಬಳಕೆಗೂ ಬಾರದ ತ್ಯಾಜ್ಯದ ಗುಡ್ಡೆಯನ್ನೇ ನಿರ್ಮಿಸುತ್ತಿರುವ ನೀರಿನ ಮತ್ತು ಎನರ್ಜಿ ಡ್ರಿಂಕ್ ಹಾಗೂ ಕೋಲ್ಡ್ರಿಂಕ್ ಅಂತ ತರಹೇವಾರಿ ಹೆಸರಿನ ತಂಪು ಪಾನೀಯಗಳ ಪೆಟ್ ಬಾಟಲ್ ಗಳ ಮೇಲೆ  ಇಲ್ಲದ ನಿಯಂತ್ರಣವನ್ನು ಪುಡ್ ಸೇಪ್ಟಿ ಯಾಂಡ್ ಸ್ಟ್ಯಾಂಡರ್ಡ ಯಾಕ್ಟ್   (ಆಹಾರಗಳ ಗುಣಮಟ್ಟ ಕಾಯಿದೆ) 2006,2011 ಹೆಸರಿನಲ್ಲಿ ಸರ್ಕಾರ ಬಂಬಾಯಿ ಮೀಠಾಯಿಯ ಮೇಲೆ ಹಾಕುತ್ತಿರುವದು ವಿಪರ್ಯಾಸವೇ ಸರಿ.

ಇಷ್ಟಕ್ಕೂ ಸ್ಥಿತಿವಂತರ ಮಕ್ಕಳು ತಿನ್ನುವ ಕುರ್ ಕುರೆ,ಮ್ಯಾಗಿ,ಮತ್ತು ಕೆಲವೊಂದು ಕಂಪನಿಗಳ ರೆಡಿ ಟು ಈಟ್ ಮೇಡ ಇನ್ ಮಿನಿಟ್ ನಂತಹ ಆಹಾರಗಳಲ್ಲಿ ಅಷ್ಟೇ ಯಾಕೆ ರಸ್ತೆ ಬದಿಯಲ್ಲಿ ಮಾರುವ ಗೋಬಿ,ನ್ಯೂಡಲ್ಸ್,ಮತ್ತು ಪಾಸ್ತಾದಂತಹ ಫಾಸ್ಟ್ ಪುಡ್ ಸೆಂಟರ್ ಗಳಲ್ಲಿ ಹಾಗೂ ಕೆಫೆಗಳಲ್ಲಿ ನಿಷೇಧವಾಗದ ಅಜಿನೋಮೋಟೋ,ಟಾರ್ ಟಾಸೈನ್,ರೋಡ್ ಮೈನ್ ಬಿ ಅಂತಹ ಕೃತಕ ಬಣ್ಣಗಳು ಮತ್ತು  ಸೋಯಾ ಸಾಸ್,ಟೊಮ್ಯಾಟೊ ಸಾಸ್, ಕಿಚಪ್ ಗಳಂತಹ ಆರೋಗ್ಯದ ಮೇಲೆ ಪರಿಣಾಮ ಬೀರುವ ವಸ್ತುಗಳ ನಿಷೇಧ ಮಾಡಬೇಕಿದ್ದ ಸರ್ಕಾರ ಬಡವರ ಮಕ್ಕಳು ಅಪರೂಪಕ್ಕೆ ಖರೀದಿಸುವ ಬಂಬೈ ಮೀಠಾಯಿ (ಕಾಟನ್ ಕ್ಯಾಂಡಿ) ಯ ಮೇಲೆ ಮಾಧ್ಯಮಗಳ ವರದಿ ಆಧರಿಸಿ ಪರಿಶೀಲನೆ ನಡೆಸಿ ರಾಜ್ಯಾದ್ಯಂತ ಮಾದರಿಗಳನ್ನು ಸಂಗ್ರಹಿಸಿ ಬಂದ ವರದಿಯ ಆಧಾರದ ಮೇಲೆ ಸದ್ಯ ನಿಷೇಧಕ್ಕೆ ಆದೇಶ ಹೊರಡಿಸಿದೆ.

ಮಲ್ಟಿ ನ್ಯಾಷನಲ್ ಕಂಪನಿಗಳ ಕೋಟ್ಯಂತರ ವಹಿವಾಟಿನ ಮೇಲೆ ನಿಯಂತ್ರಣ ಸಾಧಿಸಲು ಆಗದ ಸರ್ಕಾರ ಬಡವರ ಬಂಬಾಯಿ ಮಿಠಾಯಿಯ ಮೇಲೆ ನಡೆಸಿದ ಪರಿಶೀಲನಾ ವರದಿಯನ್ನು ಆಧಾರವಾಗಿ ಇಟ್ಟುಕೊಂಡು ನಿಷೇಧದ ಆದೇಶವನ್ನು ಹೊರಡಿಸಿದೆ

ಆದರೂ ಇತ್ತೀಚಿನ ದಿನಗಳಲ್ಲಿ ಸ್ವಚ್ಛ,ಮತ್ತು ಶುದ್ಧ ಅನ್ನುವ ಹೆಸರಿನಲ್ಲಿ ಕಣ್ಮರೆಯಾದ ಕಲ್ಲುಪ್ಪಿನಿಂದ ಹಿಡಿದು ಎಷ್ಟೋ ತಿಂಡಿಗಳು, ಮಿಠಾಯಿಗಳು ಮತ್ತು ಪೆಪ್ಪರಮೆಟ್ ಚಾಕಲೇಟ್ ಗಳನ್ನು ಅಪರೂಪಕ್ಕೆ  ನೋಡಿದಾಗ ಮನಸ್ಸು ಮತ್ತೆ ನಮ್ಮ ಬಾಲ್ಯದ ದಿನಗಳತ್ತ ದೀಪದ ಸುತ್ತ ಸುಳಿಯುವ ಮಿನುಕು ಹುಳದಂತೆ ಕ್ಷಣ ಹೊತ್ತಾದರೂ ಸುಳಿದಾಡುತ್ತದೆ



ಎತ್ತುಗಳ ಕೊರಳಲ್ಲಿ ಸಿಂಗಾರಕ್ಕೆ ಕಟ್ಟುವ ಮತ್ತು ಮನೆಯ ದೇವರ ಜಗುಲಿಯಲ್ಲಿ ಪೂಜೆಯ ಸಮಯಕ್ಕೆ ಮಾತ್ರ ಬಾರಿಸುವ ಗಳ್ಳಾಘಂಟಿಯನ್ನ ಹಿಡಿದುಕೊಂಡು ಉದ್ದದ ಬಿದಿರು ಕಟ್ಟಿಗೆಗೆ ಹಳದಿ ಮತ್ತು ಗುಲಾಬಿ ಬಣ್ಣಗಳ ಬಂಬೈ ಮೀಠಾಯಿ ಅಂತಲೇ ಹಳ್ಳಿ ಜನರ ಬಾಯಲ್ಲಿ  ಕರೆಸಿಕೊಳ್ಳುವ ಕಾಟನ್ ಕ್ಯಾಂಡಿಗೆ ಸದ್ಯ ಸರ್ಕಾರದ ಆಹಾರ ಇಲಾಖೆ ನಿಷೇಧ ಹೇರುತ್ತಿರುವದರ ಜೊತೆಗೆ ತೊಂಭತ್ತರ ದಶಕದಲ್ಲಿ ಮಕ್ಕಳಾಗಿದ್ದವರೆಲ್ಲ ಇಷ್ಟಪಟ್ಟು ತಿನ್ನುತ್ತಿದ್ದ ಸಿಹಿ ಖಾದ್ಯವೊಂದು ಕಣ್ಮರೆ ಆಗುತ್ತಿರುವದು ನಮ್ಮ ಕರಗುತ್ತಿರುವ ಆಯುಷ್ಯದ ಜೊತೆಗೆ ನಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿಯಲಿದೆ.

ಜನರ ಆರೋಗ್ಯದ ದೃಷ್ಟಿಯಿಂದ ನಿಷೇಧ ಮಾಡುತ್ತಿರುವ ಕಾಟನ್ ಕ್ಯಾಂಡಿಯ ಜೊತೆಗೆ ಇನ್ನಷ್ಟು ವಿಷಪೂರಿತ ಖಾಧ್ಯಗಳು ಕೂಡ ನಿಷೇಧವಾಗಲಿ ಅನ್ನುವ ಸದಭಿಪ್ರಾಯದ ಜೊತೆಗೆ ನಮ್ಮ ಬಾಲ್ಯವನ್ನು ಸುಂದರವಾಗಿಸಿ ಬಾಯಿಯನ್ನು ಸಿಹಿಯಾಗಿಸಿದ್ದ ಮತ್ತು ನಮ್ಮ ಮನಸ್ಸನ್ನು ಮುದಗೊಳಿಸಿದ್ದ ಕಾಟನ್ ಕ್ಯಾಂಡಿಗೆ ಐ ಮಿಸ್ ಯೂ ಅಂತ ಹೇಳಬೇಕಾದ ಅನಿವಾರ್ಯತೆಗೆ ನಾವು ನೀವೆಲ್ಲ ತಲೆ ಬಾಗಲೇ ಬೇಕು ಅಲ್ಲವಾ?? ಏನಂತೀರಿ....

-ದೀಪಕ ಶಿಂಧೇ

9482766018

Post a Comment

0Comments

Post a Comment (0)