ನಮ್ಮೂರ ಚಿತ್ರ ‘ಕೆರೆಬೇಟೆ’

VK NEWS
By -
0

 ಆತ್ಮೀಯರಾದ ಶ್ರೀ ಶೇಖರ ಕರಡಿಮನೆ ನಿನ್ನೆ (14-03-2024) ಸಂಜೆ 06-30ಕ್ಕೆ “ಕೆರೆಬೇಟೆ” ಚಿತ್ರದ ಪ್ರೀವ್ಯೂ ಇದೆ ಖಂಡಿತ ಬರಬೇಕು ಎಂದು ಕರೆದಿದ್ದರು. ಈ ಚಿತ್ರದ ಕೋ-ಡೈರೆಕ್ಟರ್ ಆಗಿರುವ ಅವರು ಒಂದು ಗಮನಾರ್ಹ ಪಾತ್ರವನ್ನೂ ಸಹಜವಾಗಿ ನಿರ್ವಹಿಸಿದ್ದಾರೆ. ನಾವು ಗೆಳೆಯರಾದ ಶ್ರೀ ರಘುನಂದನ್ ನಿರ್ದೇಶಕರು, ಶ್ರೀ ಮಂಜುನಾಥ ಕುರುವಿನಕಟ್ಟೆ ಬರಹಗಾರರು, ಕಲಾವಿದರು. ಹಾಗೂ ಶ್ರೀ ಮೋಹನ್ ಮುಂತಾದವರು ಚಿತ್ರ ನೋಡಲು ಹೋಗಿದ್ದೆವು. ಎರಡೂವರೆ ಗಂಟೆಯ ಚಿತ್ರ! ಹೀಗಿದ್ದೂ ಇದು ಮಲೆನಾಡಿನ ಪರಿಸರದಲ್ಲಿ ಮೂಡಿಬಂದ ದೃಶ್ಯಕಾವ್ಯದಂತೆ ಕಂಡಿತು. ಚಿತ್ರದ ಕಥೆ ಹಲವು ತಿರುವುಗಳಿಂದ ಕೂಡಿದ್ದು, ಅದನ್ನು ಎಲ್ಲೂ ಎಳೆತವಾಗದಂತೆ ಚಿತ್ರಕಥೆಯಲ್ಲಿ ಕಮರ್ಷಿಯಲ್ ಅಂಶಗಳೊಂದಿಗೆ ಪೋಣಿಸಿರುವುದು ಆಕರ್ಷಕವಾಗಿದೆ. ಇಂದಿನ ದಿನದಲ್ಲಿ ಉತ್ತಮ ಕನ್ನಡ ಚಿತ್ರಕ್ಕಾಗಿ ಕಾದಿರುವ ಆಕಾಂಕ್ಷಿಗಳು ಬಹಳವಿದ್ದಾರೆ! ನಿರೀಕ್ಷೆಗೆ ತಕ್ಕಂತ ವೀಕ್ಷಣೆ ಅವರಿಗೆ ಲಭ್ಯವಾಗುತ್ತಿಲ್ಲ. ಕೆರೆಬೇಟೆ ಇಂತಹದೊಂದು ಬೇಡಿಕೆ ಪೂರೈಸಿದೆ ಎನ್ನಬಹುದು!  

      ನಮ್ಮ ಮಲೆನಾಡಿನಲ್ಲಿ (ಸಾಗರ, ಸೊರಬ, ತೀರ್ಥಹಳ್ಳಿ ಮುಂತಾದ ಕಡೆ) ಚಿತ್ರಿತವಾದ ‘ಕೆರೆಬೇಟೆ’ ಅಲ್ಲಿನ ನಮ್ಮ ಸಂಸ್ಕøತಿ, ಆಚಾರ, ವಿಚಾರ, ಸಂಪ್ರದಾಯ, ನಂಬಿಕೆಗಳನ್ನೂ ಒಳಗೊಂಡಂತೆ ಭಿನ್ನ ನಲೆಗಟ್ಟಿನಲ್ಲಿದೆ.  ಹೊಡಿಬಡಿ ಮಾಸ್ ಚಿತ್ರವಾಗಿದ್ದರೂ ಅದನ್ನು ವೀಕ್ಷಕರಿಗೆ ತಲುಪಿಸಿದ ರೀತಿ ಕುತೂಹಲಕರ ಎನ್ನಬಹುದು.  ನಾಯಕ ನಾಯಕಿ ಪೋಷಕ ನಟರು, ಹೀಗೆ ಎಲ್ಲರೂ ಅವರವರ ಪಾತ್ರಕ್ಕೆ ಅಚ್ಚರಿಯೋ! ಎಂಬಂತೆ ನ್ಯಾಯ ಒದಗಿಸಿದ್ದಾರೆ. ಮಾಸ್ ನಾಯಕ ನಾಗನ ಎನರ್ಜಿ ಎಲ್ಲೂ ಕಡಿಮೆಯಾಗಿಲ್ಲ. ಪಾತ್ರಕ್ಕೆ ತಕ್ಕ ಭಾವಭಂಗಿ ವೇಷ ಆವೇಶ. ನಾಯಕಿ ಮಲೆನಾಡಿನ ಸಹಜ ಸುಂದರಿಯಾಗಿ, ಭಾವಾಭಿನಯದಲ್ಲೂ ಸೈ ಎನಿಸಿಕೊಂಡು ಯಾವ ಅನುಭವಿ ನಾಯಕಿಗೂ ಕಡಿಮೆ ಇಲ್ಲದಂತೆ ಮಿಂಚಿದ್ದಾರೆ.  ನಿರ್ದೇಶಕರು ಹೊಸಬರಾದರೂ ತಮ್ಮ ವ್ಯಾಪ್ತಿಯನ್ನು ಚೆನ್ನಾಗಿ ಅರಿತು, ಚಿತ್ರದ ಎಲ್ಲಾ ಭಾರವನ್ನು ಹೊತ್ತು ಕಾರ್ಯ ನಿರ್ವಹಿಸಿರುವುದು ಕಂಡು ಬರುತ್ತದೆ. ನಾಯಕ, ನಾಯಕಿ, ಪೋಷಕ ನಟರು ಎಲ್ಲರೂ ಹೊಸಬರೇ..(ಕೆಲವರನ್ನು ಬಿಟ್ಟು).  ಛಾಯಾಗ್ರಹಣ ಕಣ್ಣಿಗೆ ತಂಪು ನೀಡುತ್ತದೆ. ಮಲೆನಾಡಿನ ಸುಂದರ ತಾಣಗಳನ್ನು ಇನ್ನಷ್ಟು ಸಮೃದ್ಧವಾಗಿಸಿದ್ದಾರೆ. ಸಂಗೀತವೂ ಮನಮುಟ್ಟುವಂತಿದ್ದು, ಕೆಲವು ಹಾಡಿನ ತುಣುಕುಗಳು ಮೆಲುಕು ಹಾಕುವಂತಿವೆ. 

ಇಂತಹ ಚಿತ್ರಕ್ಕೆ ಹಣ ಹಾಕಿದ ನಿರ್ಮಾಪಕರನ್ನು ಅಭಿನಂದಿಸಬೇಕು. ಹೊಸಬರನ್ನು ನಂಬಿ ಸಾಹಸಕ್ಕೆ ಕೈಹಾಕಲು ಮುಂದಾಗುವವರು ತುಂಬಾ ಕಡಿಮೆ. ಇದಕ್ಕಾಗಿ ನಿರ್ಮಾಪಕರಿಗೂ ಭೇಷ್ ಎನ್ನೋಣ.  ಚಿತ್ರದ ಸಂಭಾಷಣೆಯೂ ನಮ್ಮ ಮಲೆನಾಡಿನ ಭಾಷೆಯೇ ಆಗಿದೆ (ದೀವನಾಯಕರ- ಹವ್ಯಕರ ಭಾಷೆ ಮಿಶ್ರವಾಗಿದೆ). ಇದೂ ಒಂದು ವಿಶೇಷ.  ಸೊಂಟದ ಕೆಳಗಿನ ಭಾಷೆಯೂ ಸಹಜವಾಗಿ ಮೂಡಿಬಂದಿದ್ದು, ಎಲ್ಲೂ ಅದು ಅಭಾಸ ಎನಿಸುವುದಿಲ್ಲ. ನಮ್ಮ ಗೆಳೆಯರಾದ ಶೇಖರ ಸಹಜಾಭಿನಯದಲ್ಲಿ ಗಮನ ಸೆಳೆಯುತ್ತಾರೆ. ಭಾವಭಾವರ ಪಾತ್ರದ ಒಳಹರಿವು! ‘ಕೆರೆಬೇಟೆ’ ಅರ್ಥವಾಗುವುದೇ ಚಿತ್ರದ ಅಂತ್ಯದಲ್ಲಿ. ಒಟ್ಟಿನಲ್ಲಿ ಒಂದು ಮೆಸೇಜ್ನೊಂದಿಗೆ ಉತ್ತಮ ಮನರಂಜನಾತ್ಮಕ ಚಿತ್ರವಾಗಿ ಕೆರೆಬೇಟೆ ಇಂದು ನಮ್ಮ ಮುಂದಿದೆ. ಚಿತ್ರದ ಟೀಮ್‍ಗೆ ಗುಡ್‍ಲಕ್ ಹೇಳೋಣ. ಉತ್ತಮ ಚಿತ್ರ ಬಂದಿದೆ ನೋಡಿ, ಕನ್ನಡ ಚಿತ್ರ ಪ್ರೋತ್ಸಾಹಿಸಿ.

-ಡಾ. ಬ.ಲ.ಸುರೇಶ

Post a Comment

0Comments

Post a Comment (0)