ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane) ಪ್ರಯುಕ್ತ ಸದಾಶಿವನಗರ ಸ್ಯಾಂಕಿ ಕೆರೆ ಬಳಿ ವಾಯ್ಸ್ ಆಫ್ ಸದಾಶಿವನಗರ ಸಾಮಾಜಿಕ ಸೇವಾ ಸಂಘಟನೆಯಿಂದ 170 ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಪ್ರಯುಕ್ತ ವಾಯ್ಸ್ ಆಫ್ ಸದಾಶಿವನಗರ ಸಾಮಾಜಿಕ ಸೇವಾ ಸಂಘಟನೆಯ ಅಧ್ಯಕ್ಷರಾದ ಶಿಲ್ಪಿ ಜತ್ತಿ ಹಾಗೂ ಮಲ್ಲೇಶ್ವರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅನೂಪ್ ಅಯ್ಯಂಗಾರ್ ನೇತೃತ್ವದಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಉಡುಗೂರೆ ನೀಡಿ ಸನ್ಮಾನಿಸಲಾಯಿತು. ಶಿಲ್ಪ ಜತ್ತಿ ಮಾತನಾಡಿ, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವುದು ಸರಿಯಲ್ಲ. ಏಕಬಳಕೆ ಪ್ಲಾಸ್ಟಿಕ್ ಅಪಾಯಕಾರಿಯಾಗಿದ್ದು, ಇಂತಹ ಪ್ಲಾಸ್ಟಿಕ್ ನಿಂದ ದೂರ ಇರುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಪರಿಸರ ಉಳಿಯಬೇಕು, ಜೀವಜಲದ ಮಟ್ಟದ ಹೆಚ್ಚಾಗಬೇಕು. ನಗರದಲ್ಲಿ ಮರಗಳು ಮಳೆಯಿಂದ ಧರೆಗೆ ಉರುಳುತ್ತಿದ್ದು, ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಹುಣಿಸೆ, ಹೊಂಗೆ ಸಸಿಗಳನ್ನು ಬೆಳಸಿದರೆ ಮರಗಳು ಹೆಚ್ಚು ಬಾಳಿಕೆ ಬರುತ್ತವೆ ಎಂದರು. ಅನೂಪ್ ಅಯ್ಯಂಗಾರ್ ( Anup Iyengar )ಮಾತನಾಡಿ, ವೈದ್ಯ ಎಷ್ಟು ಮುಖ್ಯವೊ ಪೌರ ಕಾರ್ಮಿಕರು ಅಷ್ಟೆ ಮುಖ್ಯ. ಪೌರ ಕಾರ್ಮಿಕರು ನಮ್ಮ ಸ್ವಚ್ಚತಾ ರಾಯಭಾರಿಗಳು. ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಾರೆ. ನಗರದ ನಾಗರಿಕರು ಕಸ ವಿಂಗಡಣೆಗೆ ಆದ್ಯತೆ ನೀಡಬೇಕು. ಸ್ವಚ್ಚತೆ ಇದ್ದರೆ ಆರೋಗ್ಯ ಎಂಬುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು ಎಂದರು.