ಲೋಕಸಭೆ ಚುನಾವಣೆ ಹೊರಬಿದ್ದಿದ್ದು 12 ದಿನಗಳ ಕಳೆದು ಹೋಗಿವೆ. ಸರ್ಕಾರ ರಚನೆಯಾಗಿ ಸಚಿವರು ಅಧಿಕಾರ ಸ್ವೀಕರಿಸಿ ಆಗಿದೆ. ಆದ್ರೀಗ ವಿದ್ಯುನ್ಮಾನ ಮತ ಯಂತ್ರ ಅಂದ್ರೆ ಇವಿಎಂನ ಚರ್ಚೆ ಮತ್ತೆ ಶುರುವಾಗಿದೆ. ಅಮೆರಿಕಗೆ ಎಲಾನ್ ಮಸ್ಕ್ ಬಿಟ್ಟ ಬಾಣ ಭಾರತಕ್ಕೆ ತಿರುಗಿದೆ. ಇವಿಎಂ ಬಳಕೆ ಬಗ್ಗೆ ಅಪಸ್ವರ ಎತ್ತಿರುವ ಎಲಾನ್ ಮಸ್ಕ್, ಇವಿಎಂ ಹ್ಯಾಕ್ ಮಾಡುವ ಸಾಧ್ಯತೆಯಿದೆ. ಇವಿಎಂ ಬಳಕೆ ಹಿಂಪಡೆಯಬೇಕು ಅಂತಾ ಆಗ್ರಹಿಸಿದ್ದಾರೆ. ಸದ್ಯ ಈ ವಿಚಾರವಾಗಿ ಭಾರತದ ಚುನಾವಣಾ ಆಯೋಗವು ಎಲಾನ್ ಮಸ್ಕ್ಗೆ ಸವಾಲು ಹಾಕಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಭಾರತದ ಚುನಾವಣಾ ಆಯೋಗ, ಇದು ಅಸಂಬದ್ಧ ಊಹಾಪೋಹವಾಗಿದ್ದು, ಭಾರತೀಯ ಚುನಾವಣೆಗಳ ವಿಶ್ವಾಸಾರ್ಹತೆಯನ್ನು ಕೆಡಿಸುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದೆ.
ಎಲಾನ್ ಮಸ್ಕ್ ಅವರೇ ಭಾರತಕ್ಕೆ ಬಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳ ಹ್ಯಾಕಿಂಗ್ ಅನ್ನು ಪ್ರದರ್ಶಿಸಲು ನಾವು ನಿಮಗೆ ಸವಾಲು ಹಾಕುತ್ತೇವೆ ಎಂದು ಹೇಳಿದೆ.
ಎಲಾನ್ ಮಸ್ಕ್ ಹೀಗೆ ಹೇಳ್ತಿದ್ದಂತೆಯೇ ಭಾರತದಲ್ಲಿ ಕಿಚ್ಚೊಂದು ಹೊತ್ತಿದೆ. ದೇಶದ ವಿಪಕ್ಷ ನಾಯಕರು ಮಸ್ಕ್ ಮಾತಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಈ ಬಗ್ಗೆ ಬರೆದುಕೊಂಡಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವಿಎಂ ಬಳಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ 48 ಮತಗಳ ಅಂತರದಿಂದ ಶಿಂಧೆ ಬಣದ ಶಿವಸೇನೆ ಅಭ್ಯರ್ಥಿ ಜಯಿಸಿದ್ದರು. ಈ ವಿಚಾರ ಪ್ರಸ್ತಾಪ ಮಾಡಿ ಇವಿಎಂ ಅಕ್ರಮದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.