ಷೇರುಪೇಟೆಯಲ್ಲಿ ಬ್ಲಡ್‌ಬಾತ್‌, ಕಂಡು ಕೇಳರಿಯದ ಕುಸಿತ

VK NEWS
By -
0


ಮುಂಬಯಿ:  ಸೋಮವಾರ ಭಾರತೀಯ ಷೇರುಪೇಟೆ ಸೂಚ್ಯಂಕಗಳು ಭರ್ಜರಿ ಏರಿಕೆ ಕಂಡಿದ್ದವು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಎನ್‌ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಮತ್ತೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಶನಿವಾರ ಎಕ್ಸಿಟ್ ಪೋಲ್‌ ಫಲಿತಾಂಶಗಳು ಭವಿಷ್ಯ ನುಡಿದ ಬೆನ್ನಲ್ಲೇ ಈ ಏರಿಕೆ ದಾಖಲಾಗಿತ್ತು. ಆದರೆ ಇದೀಗ ಮಂಗಳವಾರ ಷೇರು ಮಾರುಕಟ್ಟೆ ಸೂಚ್ಯಂಕಗಳು ತೀವ್ರ ಕುಸಿತ ಕಂಡಿವೆ. ಸೋಮವಾರ ಗಳಿಸಿದ್ದೆಲ್ಲವನ್ನೂ ಮಂಗಳವಾರ ಕಳೆದುಕೊಂಡಿವೆ.

ಬೆಳಿಗ್ಗೆ ಮಾರುಕಟ್ಟೆ ಆರಂಭವಾದ ಬೆನ್ನಲ್ಲೇ ಸೆನ್ಸೆಕ್ಸ್‌ ಶೇ. 3.51ರಷ್ಟು ಅಥವಾ 2,687.67 ಅಂಕ ಕುಸಿತ ಕಂಡು 73,781.11ಕ್ಕೆ ಇಳಿಕೆಯಾಗಿತ್ತು. ಇದೀಗ ಮಧ್ಯಾಹ್ನದ ಹೊತ್ತಿಗೆ ಸೆನ್ಸೆಕ್ಸ್ 4,291.21 ಅಂಕ ಅಥವಾ ಶೇ. 5.61ರಷ್ಟು ಕುಸಿತ ಕಂಡಿದ್ದು 72,177.57ಕ್ಕೆ ಇಳಿಕೆಯಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಐಎನ್‌ಡಿಐಎ ಮೈತ್ರಿಕೂಟ ಭಾರೀ ಪೈಪೋಟಿ ನೀಡುತ್ತಿದ್ದು, ಷೇರು ಮಾರುಕಟ್ಟೆ ನೆಲಕಚ್ಚಿದೆ. ಇದೇ ವೇಳೆ, ನಿಫ್ಟಿ 50 ಸೂಚ್ಯಂಕ ಬೆಳಿಗ್ಗೆ 9.36ರ ಹೊತ್ತಿಗೆ 604.70 ಅಂಕ ಅಥವಾ ಶೇ. 2.60ಯಷ್ಟು ಇಳಿಕೆ ಕಂಡು 22,659.20 ಅಂಕಗಳಿಗೆ ಇಳಿದಿತ್ತು. ಇದೀಗ ಮಧ್ಯಾಹ್ನ 12 ಗಂಟೆ ಹೊತ್ತಿಗೆ 1,381.40 ಅಂಕ ಅಥವಾ ಶೇ. 5.94ರಷ್ಟು ಇಳಿಕೆ ಕಂಡು 21,882.50 ಅಂಕಗಳಿಗೆ ಕುಸಿದಿದೆ.


Post a Comment

0Comments

Post a Comment (0)