ಶ್ರೀಸಂಸ್ಥಾನದವರಿoದ "ಶಿವದರ್ಶನ" ಗ್ರoಥ ಲೋಕಾರ್ಪಣೆ
ಬೆಂಗಳೂರು: ಭಾರತೀಯರಾದ ನಮಗೆ ಧರ್ಮವೇ ಜೀವನ.. ಜೀವನವೇ ಧರ್ಮ… ಅದಕ್ಕೆ ನಮಗೆ ಧರ್ಮ ಹಾಗೂ ಜೀವನ ಎರಡು ಒಂದೇ. ಧರ್ಮದ ಅನುಸಂಧಾನ ಮತ್ತು ಅನುಷ್ಠಾನದ ಮೂಲಕ ಬದುಕಿನ ಸರ್ವೋಚ್ಚಧ್ಯೇಯವಾದ ದೈವೀಕಾರುಣ್ಯದ ಪ್ರಾಪ್ತಿಯಾಗಿ ನಮ್ಮ ನಡೆಯಾಗಿರಬೇಕು. ಇದಕ್ಕಾಗಿ ವ್ಯಕ್ತಿಯಲ್ಲಿ ಸುಪ್ತವಾಗಿ ಹುದುಗಿರುವ ಧಾರ್ಮಿಕಪ್ರಜ್ಞೆಯನ್ನು ಮತ್ತು ಅಂತಸ್ಥವಾದ ದೈವಿಕತೆಯನ್ನು ಜಾಗ್ರತೆಗೊಳಿಸಲು ಧಾರ್ಮಿಕಗ್ರಂಥಗಳ ಅವಲಂಬನೆ ಅವಶ್ಯ ಎಂದು. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ತಮ್ಮ ಅಭಿಪ್ರಾಯ ಮಂಡಿಸಿದರು.
ಗಿರಿನಗರದಲ್ಲಿರುವ ʻಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿʼ ಹಮ್ಮಿಕೊಂಡ ಸಂಶೋಧಕರು, ಬಹುಶ್ರುತ ವಿದ್ವಾಂಸರಾದ ಶ್ರೀ ವಿಷ್ಣು ಭಟ್ ಡೋಂಗ್ರೆ ಅವರ "ಶಿವದರ್ಶನ" ಗ್ರoಥ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿದ ಶ್ರೀಗಳು ಪರಶಿವನ ಪಾರಮ್ಯವನ್ನು ಅರಿತ ನಮ್ಮ ಪರಮರ್ಷಿಗಳು ಅದನ್ನು ಗ್ರoಥವಾಗಿಸಿ ಅನುಗ್ರಹಿಸಿದರು. ಅದರ ಪರಿಣಾಮವೇ ʻರುದ್ರಯಾಮಲʼದಂತಹ ಮಹತ್ವದ ಕೃತಿಗಳು ಇಂದು ಕಾಣುತ್ತಿರುವುದು, ಇದೀಗ ಅoತಹ ಕೃತಿಗಳ ಅಧ್ಯನಗಳ ಮೂಲಕ ಶಿವನನ್ನು ಅರಿಯಲು ಸಾದ್ಯ.ಪ್ರಸಕ್ತ ಶಿವದರ್ಶನ ಕೃತಿಯು, ಪುರಾಣೇತಿಹಾಸ, ವೇದಶಾಸ್ತ್ರಗಳಲ್ಲಿ ಗತಿ ಶೀಲರು ಹಾಗೂ ಅವುಗಳ ಮರ್ಮವನ್ನು ಎಳೆಎಳೆಯಾಗಿ ತಿಳಿಸಿಕೊಡಲಿದೆ. ವಿಷಯಗಳನ್ನು ನವೀನ ರೀತಿಯಲ್ಲಿ ಮನೋಜ್ಞವಾಗಿ ವಿವರಿಸಬಲ್ಲ ಸಾಹಿತ್ಯ ಚಾಕ್ಯತೆಯನ್ನು ಸಂಶೋಧಕರು, ಬಹುಶ್ರುತ ವಿದ್ವಾಂಸರಾದ ಶ್ರೀ ವಿಷ್ಣು ಭಟ್ ಡೋಂಗ್ರೆಯವರು ಹೊಂದಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಶ್ರೀ ವಿಷ್ಣು ಭಟ್ ಡೋಂಗ್ರೆ ತಮ್ಮ ಕೃತಿ ಶಿವದರ್ಶನದ ಕುರಿತು ಮಾತನಾಡಿ, ಕೃತಿಯಲ್ಲಿ ಇರುವ ಮಹತ್ವದ ವಿಷಯಗಳು ಹಾಗೂ ಅವುಗಳ ವಿವರಣೆಗಳು ಮುಂದಿನ ಸಮಾಜಕ್ಕೆ ಅತೀ ಅವಶ್ಯಕ, ಮಾಹಿತಿಗಳನ್ನು ನೀಡಬಲ್ಲದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಶ್ರೀ ಮೋಹನ ಭಾಸ್ಕರ ಹೆಗಡೆ ಅವರು ಕೃತಿಯ ಸoಕ್ಷಿಪ್ತ ಪರಿಚಯ ಮಾಡಿ ಮಾತನಾಡಿ ಸಮಾಜದಲ್ಲಿ ಸಜ್ಜನಿಕೆಯ ಕೊರತೆ ಇದೆ. ಸಜ್ಜನಿಕೆಗೆ ಅಧ್ಯಯನ ಎನ್ನುವುದು ಒಂದು ಮಾರ್ಗ. ಆ ಮಾರ್ಗದಲ್ಲಿ ಸಾಗುವವರಿಗೆ ಶಿವದರ್ಶನ ಮಾರ್ಗದರ್ಶಿಯಾಗಲಿದೆ. ವಿಷ್ಣು ಭಟ್ ಡೋಂಗ್ರೆ ಅವರು ಈ ಹಿಂದೆ ಶ್ರೀ ವಿಷ್ಣುವ್ಯಾಖ್ಯಾ ಎನ್ನುವ ಗ್ರಂಥವನ್ನು ಸಮಾಜಕ್ಕೆ ನೀಡಿದ್ದರು. ಈಗ ಶಿವದರ್ಶನ ನೀಡುವ ಮೂಲಕ ಸಮಾಜಕ್ಕೆ ಹರಿಹರರ ಕುರಿತ ಮಹತ್ವದ ಮೇರು ಕೃತಿಗಳನ್ನು ನೀಡಿದ್ದಾರೆ ಎಂದರು.
ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀರಾಮಚoದ್ರಾಪುರಮಠದ ಪ್ರಕಾಶನ ವಿಭಾಗದ ಮುಖ್ಯಸ್ಥರಾದ ಶ್ರೀ ಸಂತೋಷ ಹೆಗಡೆ, ಡಾಲ್ಫಿನ್ ಇರಿಗೇಶನ್ ಸಂಸ್ಥೆಯ ಶ್ರೀ ಗಜಾನನ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ರಾಮಚoದ್ರಾಪುರ ಮಠದಿಂದ ಪ್ರಕಟವಾಗಿರುವ ಇತರ ಮಹತ್ವದ ಗ್ರಂಥಗಳಿಗಾಗಿ ಮಠದ ಶ್ರೀಭಾರತೀ ಪ್ರಕಾಶನಕ್ಕೆ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9449595254 ಕ ರೆ ಮಾಡಲು ಕೋರಲಾಗಿದೆ.