ಬೆಂಗಳೂರಿನ ಪ್ರಖ್ಯಾತ ‘ವೈಷ್ಣವಿ ನಾಟ್ಯಶಾಲೆ’ಯ ಅಂತರರಾಷ್ಟ್ರೀಯ ನೃತ್ಯಪಟು-ನಾಟ್ಯಾಚಾರ್ಯ ವಿದ್ವಾನ್ ಮಿಥುನ್ ಶ್ಯಾಂ ಅವರ ನುರಿತ ಗರಡಿಯಲ್ಲಿ, ತಯಾರಾದ ಕಲಾಶಿಲ್ಪ ಕು. ಅರುಣಿಮಾ ಶ್ರೀಕುಮಾರ್ ಬಹುಮುಖ ಪ್ರತಿಭೆ, ಭರತನಾಟ್ಯ, ಕುಚಿಪುಡಿ ಮತ್ತು ಮೋಹಿನಿಯಾಟ್ಟಂ ಮೂರು ನೃತ್ಯಶೈಲಿಗಳಲ್ಲಿ ಪರಿಶ್ರಮಿಸಿ ನಾಡಿನಾದ್ಯಂತ ನೃತ್ಯಪ್ರದರ್ಶನಗಳನ್ನು ನೀಡಿ ಮೆಚ್ಚುಗೆ ಗಳಿಸಿದ್ದಾಳೆ. ಅರುಣಿಮಾ ಕಳೆದ 20 ವರ್ಷಗಳಿಂದ ನೃತ್ಯಾಭ್ಯಾಸದಲ್ಲಿ ತೊಡಗಿಕೊಂಡಿರುವ ಪ್ರಾಮಾಣಿಕ ನೃತ್ಯವಿದ್ಯಾರ್ಥಿನಿ. ಈಕೆ, ಇದೇ ತಿಂಗಳ 17 ಭಾನುವಾರದಂದು ಬೆಳಗ್ಗೆ 9.30 ಕ್ಕೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಲಿದ್ದಾಳೆ . ಈ ಉದಯೋನ್ಮುಖ ನೃತ್ಯಕಲಾವಿದೆಯ ನೃತ್ಯದೈಸಿರಿಯನ್ನು ವೀಕ್ಷಿಸಲು ಸರ್ವರಿಗೂ ಸುಸ್ವಾಗತ.
ಬಹುಮುಖ ಪ್ರತಿಭೆಯ ಅರುಣಿಮಾ , ತನ್ನ ಬಾಲ್ಯದ ಮೂರನೆಯ ವಯಸ್ಸಿಗೇ ನೃತ್ಯದತ್ತ ಒಲವು ತೋರಿದ ಕಲಾವಂತೆ. ತಂದೆ- ಶ್ರೀಕುಮಾರ್ ಆರ್. ಕುರುಪ್, ತಾಯಿ ಸಂಗೀತ ಶ್ರೀಕುಮಾರ್ ಮಗಳ ಪ್ರತಿಭೆಯನ್ನು ಗುರುತಿಸಿ ಅವಳನ್ನು ಕಲಾಕ್ಷೇತ್ರ ಬಾನಿಯ ಭರತನಾಟ್ಯ ಕಲಿಯಲು ಸೇರಿಸಿದರು. ಮುಂದೆ- ಹೆಚ್ಚಿನ ಕಲಿಕೆಗೆ ‘ವಳವೂರುಬಾನಿ’ಯ ಭರತನಾಟ್ಯವನ್ನು ಕಲಿಯಲು ಖ್ಯಾತ ‘ವೈಷ್ಣವಿ ನಾಟ್ಯಶಾಲೆ’ಯ ನಾಟ್ಯಾಚಾರ್ಯ ಮಿಥುನ್ ಶ್ಯಾಂ ಅವರ ಮಾರ್ಗದರ್ಶನ ಪಡೆದುಕೊಂಡು, ಕಳೆದ 20 ವರ್ಷಗಳಿಂದ ನೃತ್ಯದ ವಿವಿಧ ಆಯಾಮಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾಳೆ. ಇವಳು, ಈಗಾಗಲೇ ತನ್ನ ‘ಗೆಜ್ಜೆಪೂಜೆ’ಯನ್ನು ನೆರವೇರಿಸಿಕೊಂಡು, ‘ವೈಷ್ಣವಿ ಸ್ವರ್ಣ’ ಎಂಬ ಅಭಿದಾನ ಪಡೆದ ಭಾಗ್ಯಶಾಲಿ. ಇದರೊಡನೆ ಗುರು ದೀಪಾ ನಾರಾಯಣನ್ ಅವರಲ್ಲಿ ಕೂಚಿಪುಡಿ ನೃತ್ಯ ಕಲಿತಿದ್ದಾಳೆ. ಜೊತೆಗೆ, ಬಾಲಿವುಡ್ ಮತ್ತು ಕಾನ್ಟೆಂಪೋರರಿ ನೃತ್ಯಗಳಲ್ಲೂ ತರಬೇತಿ ಹೊಂದಿದ್ದಾಳೆ. ಅಂತರ ಶಾಲೆ-ಕಾಲೇಜು ಸ್ಪರ್ಧೆಗಳಲ್ಲಿ ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟದವರೆಗೂ ಅನೇಕ ಬಹುಮಾನಗಳನ್ನು ಗೆದ್ದ ಅಗ್ಗಳಿಕೆ ಅವಳದು. ಕರಕುಶಲ ಕಲೆಗಳಲ್ಲೂ ನಿಪುಣೆ. ಕರ್ನಾಟಕ ರಾಜ್ಯಮಟ್ಟದ ‘ಪೋಸ್ಟರ್ ಮೇಕಿಂಗ್’ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ವಿಶೇಷ ಇವಳದು. .
ನಾಡಿನ ಪ್ರಮುಖ ದೇವಾಲಯಗಳಲ್ಲಿ ಮತ್ತು ಅನೇಕ ಪ್ರಮುಖ ವೇದಿಕೆಗಳಲ್ಲಿ ದೇಶದಾದ್ಯಂತ ನೃತ್ಯಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿರುವ ಹಿರಿಮೆ ಇವಳದು. ಅವುಗಳಲ್ಲಿ ಮುಖ್ಯವಾದುವೆಂದರೆ-ಚಿದಂಬರಂ ನಾಟ್ಯಾಂಜಲಿ, ಗುರುವಾಯೂರು, ತಿರುವನಂತಪುರ, ಮೂಕಾಂಬಿಕ, ಅಯ್ಯಪ್ಪ ದೇವಾಲಯ ಮುಂತಾದ ದೈವಸನ್ನಿಧಿಯಲ್ಲಿ ನೃತ್ಯಪ್ರದರ್ಶನ, ಬಾಲ ತ್ರಿಪುರಸುಂದರಿ ಕುಚಿಪುಡಿ ನೃತ್ಯೋತ್ಸವ, ಭರತಮುನಿ ಉತ್ಸವ, ಪದ್ಮಿನಿ ಪ್ರಿಯ ನೃತ್ಯೋತ್ಸವ, ಟಿಟಿಡಿಯ ಶ್ರೀ ವೆಂಕಟೇಶ್ವರ ಭಕ್ತಿವಾಹಿನಿ, ಅಯನ ಡ್ಯಾನ್ಸ್ ಕಂಪೆನಿಯೊಡನೆ ವಿಶಾಖಪಟ್ಟಣದಲ್ಲಿ ಜಿ 20 ಸಮ್ಮೇಳನದಲ್ಲಿ ಪ್ರಸ್ತುತಿ ಮುಂತಾದವು.
ಮೌಂಟ್ ಕಾರ್ಮಲ್ ಕಾಲೇಜಿನ ಇಂಡಿಯನ್ ಡ್ಯಾನ್ಸ್ ಅಸೋಸಿಯೇಶನ್ ನಲ್ಲಿ ಎರಡು ವರ್ಷಗಳ ಅವಧಿಗೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಲ್ಲದೆ, ಕಾಮರ್ಸ್ ವಿಭಾಗದಲ್ಲೂ ಚಟುವಟಿಕೆಗಳನ್ನು ನಿಭಾಯಿಸಿದ್ದಾಳೆ. ಪ್ರಸ್ತುತ, ಸೈಂಟ್ ಕ್ಲಾರೆಟ್ ಪಿ.ಯೂ. ಕಾಲೇಜಿನಲ್ಲಿ ಭಾರತೀಯ ನೃತ್ಯಗಳ ಸಂಯೋಜಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಕರ್ನಾಟಕ ರಾಜ್ಯ ಯುವೋತ್ಸವದಲ್ಲಿ, ಭರತನಾಟ್ಯ ಮತ್ತು ಮೋಹಿನಿಯಾಟ್ಟಂ ನೃತ್ಯಗಳಲ್ಲಿ ಮೊದಲ ಬಹುಮಾನಗಳು, ಕುಚಿಪುಡಿ ನೃತ್ಯದಲ್ಲಿ ಎರಡನೆಯ ಬಹುಮಾನ ಗಳಿಸಿದ್ದಾಳೆ. ಪ್ರತಿಭಾ ಅನ್ವೇಷಣ ಸ್ಪರ್ಧೆಯಲ್ಲಿ ಮೋಹಿನಿಯಾಟ್ಟಂನಲ್ಲೂ ಬಹುಮಾನಿತಳು. ಬಾಲಿವುಡ್ ಡ್ಯಾನ್ಸ್ ನಲ್ಲೂ ಬಹುಮಾನ ಪಡೆದ ಅದೃಷ್ಟ ಹಾಗೂ ಕಾರ್ಯಾಗಾರಗಳಲ್ಲಿ ನೃತ್ಯಸಂಯೋಜಕಿಯಾಗಿ ಅನುಭವ ಪಡೆದ ವಿಶೇಷ ಇವಳದು.******* ವೈ.ಕೆ.ಸಂಧ್ಯಾ ಶರ್ಮ